

ಮೈಸೂರು:ಮಳೆ ಇಲ್ಲದೆ ಬೆಳೆ ಇಲ್ಲ, ಬೆಳೆ ಬಿತ್ತದೆ ಕೂಲಿಯೂ ಇಲ್ಲ ಅನ್ನೋ ಬೇಸಿಗೆಯಲ್ಲಿನ ಕೂಲಿ ಕಾರ್ಮಿಕರ ವಲಸೆ ತಪ್ಪಿಸಿ ಅವರಿರುವಲ್ಲೇ ಕೆಲಸ ನೀಡಲು ಬಂದಿದೆ ದುಡಿಯೋಣ ಬಾ ವಿಶೇಷ ಅಭಿಯಾನ.
ಬಿರು ಬೇಸಿಗೆಯಲ್ಲಿ ದುಡಿಮೆಗೆ ನಗರವನ್ನರಿಸಿ ಹೋಗುವ ಜನರಿಗೆ ತಮ್ಮ ಹಳ್ಳಿಯಲ್ಲೇ ಸ್ಥಳೀಯವಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರಂತರ ಕೆಲಸವನ್ನು ಒದಗಿಸಲು ಜಿಲ್ಲಾ ಪಂಚಾಯಿತಿಯಿಂದ ‘ದುಡಿಯೋಣ ಬಾ’ ವಿಶೇಷ ಅಭಿಯಾನದ ಆಸರೆ ಹೆಜ್ಜೆಯನ್ನಿಟ್ಟಿದೆ. ಸರ್ಕಾರದ ಸೂಚನೆ ಮೇರೆಗೆ ಒಂದು ತಿಂಗಳ ಕಾಲ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಅರ್ಹ ಕೂಲಿಕಾರರು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಪಡೆದುಕೊಳ್ಳಬಹುದು.
ಈ ಅಭಿಯಾನದ ಮೂಲಕ ಅರ್ಹ ಕೂಲಿಕಾರರಿಗೆ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತಿದ್ದು, ನರೇಗಾ ಯೋಜನೆಯಡಿ ಕೂಲಿಕಾರರಿಗೆ 100 ದಿನಗಳ ಅಕುಶಲ ಕೆಲಸವನ್ನು ಒದಗಿಸಲು ದುಡಿಯೋಣ ಬಾ ಅಭಿಯಾನವನ್ನು ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನಡೆಸಲು ಮುಂದಾಗಿದೆ.
ಕೆಲಸ ಪಡೆಯುವುದು ಹೇಗೆ?: ನರೇಗಾ ಯೋಜನೆಯಡಿ ಅರ್ಹ ಕುಟುಂಬಗಳು ಜಾಬ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರ ಬೇಕು. ಇದಕ್ಕಾಗಿ ಗ್ರಾಮೀಣ ಭಾಗದ 18 ವರ್ಷ ಮೇಲ್ಪಟ್ಟವರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ಜಾಬ್ ಕಾರ್ಡ್ ಪಡೆಯಬಹುದು. ನಂತರ ಕೂಲಿಕಾರರು ಗ್ರಾಮ ಪಂಚಾಯಿತಿಗೆ ಕೆಲಸದ ಅರ್ಜಿ ಸಲ್ಲಿಸಿ ಸಾಮೂಹಿಕ ಕೆಲಸ ಪಡೆಯಬೇಕು.
ದುಡಿಯೋಣ ಬಾ ಅಭಿಯಾನದಡಿ ನರೇಗಾ ಯೋಜನೆಯಿಂದ ಹೊರಗಿರುವ ಅರ್ಹ ಕುಟುಂಬ ಮತ್ತು ದುರ್ಬಲ ವರ್ಗಗಳ ಕುಟುಂಬಗಳನ್ನು ಗುರುತಿಸುವುದು, ನೊಂದಾಯಿತ ಕೂಲಿಕಾರರಿಗೆ ನಿರಂತರ ಅಕುಶಲ ಕೆಲಸವನ್ನು ಒದಗಿಸಿ ವಲಸೆ ಪ್ರವೃತ್ತಿಯನ್ನು ತಗ್ಗಿಸುವುದು, ದುರ್ಬಲ ವರ್ಗದ ಕುಟುಂಬ ಹಾಗೂ ವಿಶೇಷ ಚೇತನರು, ಮಹಿಳೆಯರು, ಲಿಂಗತ್ಯ ಅಲ್ಪಸಂಖ್ಯಾತರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ.
ದಿನಗೂಲಿ ಹೆಚ್ಚಳ: ಈಗಾಗಲೇ 2025-26 ನೇ ಸಾಲಿನ ಏಪ್ರಿಲ್ 1 ರಿಂದ ನರೇಗಾ ಯೋಜನೆಯಡಿ ದುಡಿಯುವ ಕಾರ್ಮಿಕರ ಒಂದು ದಿನದ ವೇತನ 370ಕ್ಕೆ ಏರಿಕೆಯಾಗಿದೆ. ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತಿದೆ. ಜಾಬ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಯೋಜನೆಯಡಿ 5 ಲಕ್ಷ ರೂ.ವರೆಗೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿದೆ.
ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವುದು, ನಾಲಾ ಅಭಿವೃದ್ಧಿ, ರಸ್ತೆ ಬದಿ ನೆಡುತೋಪು, ಕೃಷಿ ಅರಣ್ಯೀಕರಣ, ಶಾಲಾಭಿವೃದ್ಧಿ ಕಾಮಗಾರಿಗಳು, ಅಂಗನವಾಡಿ, ಗ್ರಾಮೀಣ ರಸ್ತೆ, ಚರಂಡಿ ಕಾಮಗಾರಿಗಳು ಸೇರಿದಂತೆ ಇತರೆ ಕಾಮಗಾರಿಗಳಲ್ಲಿ ದುಡಿಯಲು ಅವಕಾಶವಿದ್ದು, ಈ ಕುರಿತು ಅಭಿಯಾನದಲ್ಲಿ ಅರಿವು ಮೂಡಿಸಲಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ವಲಸೆ ತಪ್ಪಿಸಿ, ಕೂಲಿಕಾರರಿಗೆ ಕೆಲಸ ಒದಗಿಸುವುದು ನರೇಗ ಯೋಜನಯೆ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸ್ತ್ರೀ ಚೇತನ ಅಭಿಯಾನ ಯಶಸ್ವಿಯಾಗಿದ್ದು, ಈಗ ದುಡಿಯೋಣ ಬಾ ಅಭಿಯಾನವನ್ನು ಸಹ ಗ್ರಾಮೀಣ ಜನರು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಸರ್ಕಾರದ ಯೋಜನೆ ಯಶಸ್ವಿಯಾಗಲಿದೆ. ಈ ನಿಟ್ಟಿನಲ್ಲಿ ವೈಯುಕ್ತಿಕ ಅಥವಾ ಸಾಮೂಹಿಕ ಕೂಲಿಯನ್ನು ಸೃಷ್ಟಿಸಿ ತಾವು ಇರುವ ಜಾಗದಲ್ಲೇ ಉದ್ಯೋಗ ಸೃಷ್ಟಿಸಿಕೊಳ್ಳುವ ಕೆಲಸ ಮಾಡಲು ದುಡಿಯೋಣ ಬಾ ಅಭಿಯಾನ ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಜನರು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಎಸ್.ಯುಕೇಶ್ ಕುಮಾರ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ
ಜಿಲ್ಲೆಯಲ್ಲಿ ಯಾರು ಸಹ ಕೆಲಸ ಇಲ್ಲದೆ ಸಮಸ್ಯೆ ಎದುರಿಸಬಾರದು ಎಂಬ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನವನ್ನು ಸರ್ಕಾರದ ಅದೇಶದ ಮೇರೆಗೆ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಡಿ ಪುರುಷರು ಹಾಗೂ ಮಹಿಳೆಯರಿಗೆ ಸಮಾನವಾದ ವೇತನ ನೀಡಲಾಗುತ್ತಿದ್ದು, 18 ವರ್ಷ ಮೇಲ್ಪಟ್ಟವರು ಜಾಬ್ ಕಾರ್ಡ್ ಪಡೆದುಕೊಂಡು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಂಡು ಕೆಲಸ ಪಡೆಯಬಹುದು. ಅಭಿಯಾನದ ಮೂಲಕ ಕೆಲಸದ ಬೇಡಿಕೆ ಸ್ವೀಕರಿಸಿ ಗ್ರಾಮ ಪಂಚಾಯಿತಿ ಮೂಲಕ ಕೆಲಸ ಒದಗಿಸಲು ಜಿಲ್ಲಾ ಪಂಚಾಯಿತಿ ಸದಾ ಸಿದ್ಧವಿದೆ.
ಡಾ.ಎಂ.ಕೃಷ್ಣರಾಜು, ಉಪಕಾರ್ಯದರ್ಶಿ (ಅಭಿವೃದ್ಧಿ), ಜಿಲ್ಲಾ ಪಂಚಾಯಿತಿ