ಉತ್ತಮ ಸಮಾಜ ನಿರ್ಮಾಣಕ್ಕೆ ಒಂದಾಗೋಣ

12 Jaggu 2
ಬೆಳಗಾವಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವವನ್ನು ಬಸವರಾಜ ಹೆಗ್ಗನಾಯಕ ಉದ್ಘಾಟಿಸಿದರು. ವಿದ್ಯಾವತಿ ಭಜಂತ್ರಿ, ರಾಜು ನಾವಿ, ಪ್ರೇಮ ಚೌಗಲಾ, ಸಂತೋಷ ಹಡಪದ, ಶಿವಾನಂದ ಹುನ್ನೂರ, ಮಾಂತೇಶ ಹಂದಿನ್ನವರ, ಸಂತೋಷ ನಾವಿ, ಆನಂದ ಕುರ್ಲಿ, ಸುರೇಶ ಹಡಪದ, ನಾಗಪ್ಪ ಹಡಪದ, ಸಾತಗೌಡ ನಾವಿ ಇತರರಿದ್ದರು.
Published on

ಬೆಳಗಾವಿ: ಹಡಪದ ಅಪ್ಪಣ್ಣನವರ ವಚನಗಳನ್ನು ಅಭ್ಯಸಿಸಿದರೆ ಧರ್ಮ, ಜಾತಿ, ಜನಾಂಗ ಹಾಗೂ ಕೀಳರಿಮೆ ಬಿಟ್ಟು ನಾವೆಲ್ಲರೂ ಒಂದೇ ಎಂದು ತಿಳಿದು ಉತ್ತಮ ಸಮಾಜ ರೂಪಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಹೇಳಿದರು.

ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಹಡಪದ ಅಪ್ಪಣ್ಣ ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಕೀಳರಿಮೆ ಹೋಗಲಾಡಿಸಲು ಶ್ರಮಿಸಿದವರು. ಅವರ ನಡೆ-ನುಡಿ ಹಾಗೂ ಸೌಮ್ಯ ಗುಣಗಳಿಂದಾಗಿ ಬಸವಣ್ಣನವರ ಪ್ರೀತಿ ಪಾತ್ರಕ್ಕೊಳಗಾಗಿದ್ದರು. ನಾವು ಬೇರೆ, ಬೇರೆ ಜಾತಿಯವರಾದರೂ ಕೂಡ ಮಾನವರು. ಬೇಧ-ಭಾವ ಬಿಟ್ಟು ಉತ್ತಮ ನಾಗರಿಕರಾಗಿ ಬದುಕಲು ವಚನಗಳ ಮೂಲಕ ಸಂದೇಶ ಸಾರಿದ್ದರು. ಹಡಪದ ಅಪ್ಪಣ್ಣ ನಡೆದು ಬಂದ ದಾರಿ, ಅವರ ಆದರ್ಶ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಿಸಬಹುದಾಗಿದೆ ಎಂದರು.

ಸಾಹಿತಿ ಮೈತ್ರಾಯಿಣಿ ಗದಿಗೆಪ್ಪಗೌಡರ ಮಾತನಾಡಿ, ಹಡಪದ ಎಂಬ ಸಮುದಾಯದಲ್ಲಿ 12ನೇ ಶತಮಾನದಲ್ಲಿ ಜನಿಸಿದ ಅವರು ತುಂಬಾ ಕೀಳರಿಮೆ ಅನುಭವಿಸಿದ್ದರು. 12ನೇ ಶತಮಾನದ ಕ್ರಾಂತಿಕಾರಿ ಹೋರಾಟದಲ್ಲಿ ಭಾಗಿಯಾಗಿ ಬಸವಣ್ಣವರಿಗೆ ಪ್ರಿಯಮಿತ್ರರಾಗಿ ಅನುಭವ ಮಂಟಪದಲ್ಲಿ ಮುಖ್ಯಸ್ಥಾನ ಪಡೆದು, ಸಮಾಜದಲ್ಲಿನ ಜಾತಿ ಬೇಧ-ಭಾವ ಹೋಗಲಾಡಿಸಲು ಪ್ರಮುಖಪಾತ್ರ ವಹಿಸಿದ್ದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ರಾಜು ನಾವಿ, ಪ್ರೇಮ ಚೌಗಲಾ, ಸಂತೋಷ ಹಡಪದ, ಶಿವಾನಂದ ಹುನ್ನೂರ, ಮಹಾಂತೇಶ ಹಂದಿನ್ನವರ, ಸಂತೋಷ ನಾವಿ, ಆನಂದ ಕುರ್ಲಿ, ಸುರೇಶ ಹಡಪದ, ನಾಗಪ್ಪ ಹಡಪದ, ಸಾತಗೌಡ ನಾವಿ, ಸೋಮು ನಾವಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net