ಕ್ರೀಡೆಯ ಮೂಲಕ ಒಗ್ಗೂಡುವಂತಾಗಲಿ

ಕ್ರೀಡೆಯ ಮೂಲಕ ಒಗ್ಗೂಡುವಂತಾಗಲಿ
Published on

ವಿರಾಜಪೇಟೆ: ಆಟಗಾರ ಮೈದಾನದಲ್ಲಿ ನೀಡುವ ಉತ್ತಮ ಪ್ರದರ್ಶನದ ಮೂಲಕ ಪ್ರಚಲಿತನಾಗುತ್ತಾನೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಬೇಟೋಳಿ ರಾಮನಗರ ಗ್ರಾಮ ಫ್ರೆಂಡ್ಸ್ ವತಿಯಿಂದ ಹೆಗ್ಗಳ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 3ನೇ ವರ್ಷದ ಹೊನಲು ಬೆಳಕಿನ ಪ್ರೋ ಮ್ಯಾಟ್ ಕಬಡ್ಡಿ ಪ್ರೀಮಿಯರ್ ಲೀಗ್ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳಿಗೆ ಸಾಮರಸ್ಯ ಬೆಸೆಯುವ ಸಾಮರ್ಥ್ಯವಿದೆ. ಕ್ರೀಡೆಗಳ ಮೂಲಕ ಎಲ್ಲರೂ ಒಗ್ಗೂಡುವಂತಾಗಬೇಕು ಎಂದರು. ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಹೋಬಳಿ ವ್ಯಾಪ್ತಿಯ ಮೈದಾನಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ರಾಜ್ಯಸಭಾ ಸದಸ್ಯ ಅಜಯ್ ಬಾಕಂದ್ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಪುನರ್ವಸತಿ ಶಾಲೆ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ವಿಶೇಷ ಅನುದಾನ ನೀಡುತ್ತೇನೆ ಎಂದು ಹೇಳಿದ್ದಾರೆ. ಭಾಗಮಂಡಲ, ವಿರಾಜಪೇಟೆ, ಪೊನ್ನಂಪೇಟೆ ಹೋಬಳಿ ಮಟ್ಟದ ವಿವಿಧ ಮೈದಾನಗಳನ್ನು ಅಭಿವೃದ್ಧಿ ಪಡಿಸಲು ಬಜೆಟ್‌ನಲ್ಲಿ ವಿಶೇಷ ಅನುದಾನ ಅನುಮೋದಿಸಲಾಗಿದ್ದು, ಸದ್ಯದಲ್ಲೇ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದರು.

ಸಂಸದ ಯದುವೀರ್ ಒಡೆಯರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆಯ ಮೂಲಕ ಜನರು ಒಂದುಗೂಡುತ್ತಾರೆ. ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೈಗೊಂಡಿರುವ ಯೋಜನೆಗಳ ಅನುಷ್ಠಾನಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಲಿಟಲ್ ಸ್ಕಾಲರ್ಸ್ ಅಕಾಡೆಮಿ ಆಡಳಿತಾಧಿಕಾರಿಗಳಾದ ಪೂಜಾ ರವೀಂದ್ರನ್, ಜಿ.ಪಂ. ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಪಟ್ಟಡ ರಕ್ಷಿತ್ ಚಂಗಪ್ಪ, ಬಿ.ವಿ.ಹೇಮಂತ್ ಇತರರಿದ್ದರು.

ಲೀಗ್ ಮಾದರಿಯಲ್ಲಿ ನಡೆದ ಪಂದ್ಯದಲ್ಲಿ 8ತಂಡಗಳು ಭಾಗವಹಿಸಿದ್ದು, ಡ್ರೀಮ್ ವಲ್ಡ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ದ್ವಿತೀಯ ಸ್ಥಾನಕ್ಕೆ ಆರ್.ಆರ್. ಫ್ರೆಂಡ್ಸ್ ತಂಡ ತೃಪ್ತಿಪಟ್ಟುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net