ವಚನ ಸಾಹಿತ್ಯದ ತತ್ವ ಅರಿಯಲಿ

2 GDG 3
Published on

ಗದಗ: ವಚನ ಸಾಹಿತ್ಯದ ತತ್ವಗಳನ್ನು ಅರಿತು ಯುವಜನಾಂಗ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ, ದಾಸೋಹ ಸಿದ್ಧಾಂತಗಳಡಿ ನವ ಸಮಾಜ ನಿರ್ಮಾಣವಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.

ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನ ನಿಮಿತ್ತ ನಗರದ ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಹಳಕಟ್ಟಿ ಅವರ ಪಾತ್ರ ಮಹತ್ತರವಾಗಿದೆ. ಅರ್ಥಪೂರ್ಣ, ಅತ್ಯಮೂಲ್ಯ ವಚನಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಎಡೆಯೂರು ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಸಂಶೋಧಕ ಮತ್ತು ಸಾಹಿತ್ಯ ಪ್ರಚಾರಕ ಡಾ.ಫ.ಗು ಹಳಕಟ್ಟಿಯವರು ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಬ್ರಿಟಿಷರ ಕಾಲದಲ್ಲಿ ವಚನ ಸಾಹಿತ್ಯ ಪ್ರಕಟಿಸುವುದು ಸುಲಭದ ಕಾರ್ಯವಾಗಿದ್ದಿಲ್ಲ. ಅಡೆತಡೆಗಳನ್ನು ಎದುರಿಸಿ ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ಸ್ವಂತ ಮನೆಯನ್ನು ಮಾರಿರುವುದು ಅವರ ಇಚ್ಛಾಶಕ್ತಿಯನ್ನು ತೋರಿಸುತ್ತದೆ ಎಂದರು.

ಶ್ರದ್ಧೆ ಗಮನಿಸಿದ ಅನೇಕ ಮಠಾಧೀಶರು ಫ.ಗು ಹಳಕಟ್ಟಿಯವರನ್ನು ಒಬ್ಬ ಶರಣರಂತೆ ಭಾವಿಸಿ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಿದರು. ವಚನ ಸಾಹಿತ್ಯ ಪ್ರತಿಯೊಬ್ಬರ ಮನೆಗೆ ತಲುಪುವ ಕಾರ್ಯವಾಗಬೇಕು ಎಂದರು.

ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ ಸಂಗಮನಾಥ ಲೋಕಪೂರ ಉಪನ್ಯಾಸ ನೀಡಿ, ಹಳಕಟ್ಟಿ ಅವರು 1926ರಲ್ಲಿ ಬಳ್ಳಾರಿಯಲ್ಲಿ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1928ರ ಜೂನ್‌ನಲ್ಲಿ ಕರ್ನಾಟಕ ಏಕೀಕರಣ ಪರಿಷತ್ತಿನ 3ನೇ ಅಧ್ಯಕ್ಷ ಪದವಿ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬ್ರಿಟಿಷ್ ಸರ್ಕಾರದಿಂದ ರಾವ್‌ಬಹದ್ದೂರ್ ಮತ್ತು ರಾವ್‌ಸಾಹೇಬ ಪ್ರಶಸ್ತಿ, ವಚನ ಶಾಸ್ತ ಪ್ರವೀಣ, ವಚನ ಶಾಸ್ತ್ರ ಪಿತಾಮಹ ಮುಂತಾದ ಗೌರವಗಳಿಗೆ ಪಾತ್ರರಾದವರು ಎಂದು ಫ.ಗು. ಹಳಕಟ್ಟಿಯವರ ಜೀವನ ಮತ್ತು ಸಾಧನೆಯ ಪ್ರಮುಖ ವಿಷಯಗಳನ್ನು ವಿವರಿಸಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾ ಬಬರ್ಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಎನ್. ಬಳ್ಳಾರಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ವಾರ್ತಾಧಿಕಾರಿ ವಸಂತ ಮಡ್ಲೂರ ಇತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಸ್ವಾಗತಿಸಿದರು. ಮೃತ್ಯುಂಜಯ ಹಿರೇಮಠ ಮತ್ತು ತಂಡದವರು ವಚನ ಸಂಗೀತ ಪ್ರಸ್ತುತ ಪಡಿಸುವರು. ಪ್ರೊ. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net