ಔಷಧ ವಿಜ್ಞಾನ ಕ್ಷೇತ್ರದ ಮಹತ್ವ ಅರಿಯಲಿ: ಡಾ.ಗಿರೀಶ್ ಕಪೂರ್

Published on

ಮೈಸೂರು: ಔಷಧಗಳು ಅಂತಿಮವಾಗಿ ಮನುಷ್ಯರ ಒಳಿತಾಗಿ ಉಪಯೋಗವಾಗುತ್ತವೆ ಎನ್ನುವುದನ್ನು ಔಷಧ ಸಂಶೋಧಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೈದಾರಬಾದಿನ ಯುನೈಟೆಡ್ ಸ್ಟೇಟ್ ಫಾರ್ಮಕೋಪಿಯಾದ ಇಂಡಿಯಾ ಸೈಟ್ ಆಪರೇಷನ್ ಮತ್ತು ಸೈಟ್ ಹೆಡ್‌ನ ಹಿರಿಯ ಉಪಾಧ್ಯಕ್ಷ ಡಾ.ಗಿರೀಶ್ ಕಪೂರ್ ಹೇಳಿದರು.

ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಶ್ರೀರಾಜೇಂದ್ರ ಸಭಾಂಗಣದಲ್ಲಿ ಜೆಎಸ್‌ಎಸ್-ಎಎಚ್‌ಇಆರ್‌ನ ಅಂಗ ಸಂಸ್ಥೆಯಾದ ಜೆಎಸ್‌ಎಸ್ ಫಾರ‌್ಮಸಿ ಕಾಲೇಜಿನಿಂದ ಮಂಗಳವಾರ ಆಯೋಜಿಸಿದ್ದ ‘ಸಮವರ್ತನ’ ಪದವಿ ಪ್ರದಾನ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಔಷಧ ವಿಜ್ಞಾನ ಕ್ಷೇತ್ರ ಒಂದು ಜವಾಬ್ದಾರಿಯುತ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಇದರ ಮಹತ್ವ ಅರಿತುಕೊಂಡು ಅಧ್ಯಯನ ಮಾಡಬೇಕು. ಪದವಿ ಅಭ್ಯಾಸ ಮಾಡುವ ಸಂದರ್ಭದಲ್ಲಿಯೇ ನೀವು ಎಷ್ಟೋ ಸಂಶೋಧನೆಗಳನ್ನು ನಡೆಸಬಹುದು. ಹೊಸತನ್ನು ಆವಿಷ್ಕಾರ ಮಾಡಲು ಶುರು ಮಾಡಬಹುದು. ಆದರೆ ನೀವು ಕಂಡು ಹಿಡಿಯುವ ಹೊಸ ಔಷಧಗಳ ಸಂಯುಕ್ತ ಮಿಶ್ರಣ ಅಂತಿಮವಾಗಿ ಮನುಷ್ಯರ ಒಳಿತಾಗಿ ಉಪಯೋಗವಾಗುತ್ತವೆ ಎನ್ನುವ ಅರಿವು ಇರಬೇಕು. ಈ ಹಿನ್ನೆಲೆಯಲ್ಲಿ ಬಹಳ ಜಾಗರೂಕತೆಯಿಂದ ಅಭ್ಯಾಸ ಮಾಡಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ಹೊರಬರುವುದರಲ್ಲಿ ಸಂದೇಹವಿಲ್ಲ ಎಂದು ಸಲಹೆ ನೀಡಿದರು.

ಔಷಧ ವಿಜ್ಞಾನ ಕ್ಷೇತ್ರ ಫಲಿತಾಂಶ ಆಧಾರಿತವಾದ ವಲಯವಾಗಿರುವುದರಿಂದ ತರಬೇತಿ ಬಹಳ ಮುಖ್ಯ. ಆದ್ದರಿಂದ ಓದುವ ಸಮಯದಲ್ಲೇ ಸೂಕ್ತ ರೀತಿಯಲ್ಲಿ ವಿದ್ಯಾರ್ಥಿಗಳು ತರಬೇತಿಯನ್ನು ಹೊಂದಬೇಕಾಗುತ್ತದೆ. ಜತೆಗೆ ಎಲ್ಲ ಕ್ಷೇತ್ರಗಳನ್ನು ಆಧುನಿಕ ತಂತ್ರಜ್ಞಾನ ಬೆಳೆದಿರುವುದರಿಂದ ಆಧುನಿಕ ತಂತ್ರಜ್ಞಾನದ ಕೌಶಲವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕ್ಲಿನಿಕಲ್ ಟ್ರಯಲ್‌ಗೆ ಒಳಗಾಗುವ ರೋಗಿಗಳ ಜತೆ ಸಮಯೋಚಿತವಾಗಿ ವರ್ತನೆ ಮಾಡುವುದನ್ನು ಕಲಿತುಕೊಳ್ಳಬೇಕು. ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಟ್ರಯಲ್‌ಗೆ ಒಳಗಾಗುವ ರೋಗಿಗಳಿಗೆ ನಿಮ್ಮ ಅಭ್ಯಾಸಕ್ಕೆ ಹಾಗೂ ನಿಮ್ಮ ಸಂಶೋಧನೆ-ಆವಿಷ್ಕಾರಕ್ಕೆ ಮೂಲಾಧಾರವಾಗಿರುತ್ತಾರೆ. ಅವರನ್ನು ಸರಿಯಾಗಿ ನೋಡಿಕೊಂಡರೆ ನಿಮ್ಮ ಸಂಶೋಧನೆಗೆ ಯಾವುದೇ ಅಡ್ಡಿ-ಆತಂಕ ಇರುವುದಿಲ್ಲ ಎಂದರು.

ಔಷಧ ಕ್ಷೇತ್ರದಲ್ಲಿ ಒಂದೇ ದಿನಕ್ಕೆ ಫಲಿತಾಂಶ ಬರುವುದಿಲ್ಲ. ನೀವು ಕಂಡು ಹಿಡಿಯಬೇಕಾದ ಔಷಧವು ತಕ್ಕ ರೀತಿಯಲ್ಲಿ ಸಿದ್ಧಗೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ತಾಳ್ಮೆಯಿಂದ ಸಂಶೋಧನೆ ಕೈಗೊಳ್ಳಬೇಕು. ಜತೆಗೆ ಇದಕ್ಕೆ ಮಾನಸಿಕವಾಗಿ ಸಿದ್ಧವಾಗಿರಬೇಕು ಎಂದು ತಿಳಿಸಿದರು.

ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ್ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್-ಎಎಚ್‌ಇಆರ್ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಕುಲಸಚಿವ ಡಾ.ಬಿ.ಮಂಜುನಾಥ್, ಜೆಎಸ್‌ಎಸ್ ಾರ‌್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್, ಉಪ ಪ್ರಾಂಶುಪಾಲ ಡಾ.ಜಿ.ವಿ.ಪೂಜಾರ್, ಪರೀಕ್ಷಾಂಗ ನಿಯಂತ್ರಕ ಡಾ.ಆರ್.ಸುಧೀಂದ್ರ ಭಟ್, ಶೈಕ್ಷಣಿಕ ಡೀನ್ ವಿಶಾಲಕುಮಾರ್ ಗುಪ್ತಾ ಇತರರು ಇದ್ದರು.

ಚಿನ್ನದ ಪದಕ ಪಡೆದ ಪದವೀಧರರು

ಎ.ಜೆ.ಸರೋಜ್ (ಡಿ ಫಾರ್ಮ್), ಅನಿರುದ್ಧ್ ಕಾಮತ್ (ಬಿ ಫಾರ್ಮ್), ಕಾಮಾಕ್ಷಿ ಶ್ರೇಯಾ (ಫಾರ್ಮ್ ಡಿ ), ಫಾರ್ಮಾಸ್ಯುಟಿಕ್ಸ್ ವಿಭಾಗದ ಅಂಜು ಜೇಮ್ಸ್ (ಎಂ ಫಾರ್ಮ್), ಔಷಧ ನಿಯಂತ್ರಣ ವ್ಯವಹಾರಗಳ ವಿಭಾಗದ ಕಾಟಿಕಲಾ ತನ್ವಿ, ಔಷಧೀಯ ರಸಾಯನಶಾಸ್ತ್ರ ವಿಭಾಗದ ಎಸ್.ಲಕ್ಷ್ಮೀ, ಫಾರ್ಮಾಸ್ಯುಟಿಕಲ್ ಕ್ವಾಲಿಟಿ ಅಶ್ಯೂರೆನ್ಸ್ ವಿಭಾಗದ ಆರ್.ಮೇಘನಾ, ಆರ್.ದರ್ಶನ್, ಫಾರ್ಮಾಕಾಲಜಿ ವಿಭಾಗದ ಜಿ.ಬಿಂಧುಶ್ರೀ. ಕೈಗಾರಿಕಾ ಫಾರ್ಮಸಿ ವಿಭಾಗದ ತುಮ್ಮೂರು ಜಯಶ್ರೀ ರೆಡ್ಡಿ, ಫಾರ್ಮಸಿ ಪ್ರಾಕ್ಟೀಸ್‌ನ ಜಿ.ಶಿರಿಷಾ, ಬಯೋಟೆಕ್ನಾಲಜಿಯ ಮೇಘಾ ಕುದ್ಪಾಜೆ ಮತ್ತು ಫಾರ್ಮಾಕೊಗ್ನೋಸಿಯ ಹರ್ಷ ಪ್ರತಾಪ್‌ಸಿಂಗ್ ಚಿನ್ನದ ಪದಕ ಪಡೆದರು.

2024-25ನೇ ಸಾಲಿಗೆ ಬಿ ಫಾರ್ಮ್ (104), ಫಾರ್ಮ್ ಡಿ (35), ಡಿ ಫಾರ್ಮ್ (30) ಮತ್ತು ಎಂ ಫಾರ್ಮ್ (98) ಪದವಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 267 ಪದವೀಧರರು ಪದವಿ ಪ್ರಮಾಣಪತ್ರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net