ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಿ

5ANKOLA2
Published on

ಅಂಕೋಲಾ: ಹಿಂದುಳಿದ ವ್ಯಕ್ತಿಯನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲರೂ ಪ್ರಯತ್ನಿಸಬೇಕು. ಅಭಿವೃದ್ಧಿಗಾಗಿ ರಾಜಕೀಯ ಮಾಡದೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ಸತೀಶ ಕೆ. ಸೈಲ್ ಹೇಳಿದರು.

ಕರ್ನಾಟಕ ಸಂಘ ಮತ್ತು ದೀನಬಂಧು ಸ.ಪ.ಗಾಂವಕರ ದತ್ತಿನಿಧಿ ಸಮಿತಿ ವತಿಯಿಂದ ಇಲ್ಲಿನ ನಾಡವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ನರೇಂದ್ರ ದೇಸಾಯಿ ಅವರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ನರೇಂದ್ರ ದೇಸಾಯಿ ಅವರು ಕಷ್ಟದ ಜೀವನದಿಂದ ಮೇಲಕ್ಕೆ ಬಂದವರು. ಹಿಂದುಳಿದ ವ್ಯಕ್ತಿಗಳಿಗೆ ಸಹಾಯ ಹಸ್ತ ನೀಡಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು. ಸೈಲ್ ಅವರು ದೀನ ಬಂಧು ಸ.ಪ. ಗಾಂವಕರ ದತ್ತಿನಿಧಿಗೆ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

ದತ್ತಿನಿಧಿ ಸಮಿತಿಯ ಅಧ್ಯಕ್ಷ ಕೆ.ವಿ. ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, 1952ರಲ್ಲಿ ಸ.ಪ. ಗಾಂವಕರ ನೇತೃತ್ವದಲ್ಲಿ ಕರ್ನಾಟಕ ಸಂಘವು ಸ್ಥಾಪನೆಗೊಂಡಿತು. ಸ.ಪ. ಗಾಂವಕರ ನೆನಪಿಗಾಗಿ ಕಳೆದ ವರ್ಷದಿಂದ ಅವರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅಲ್ಲದೆ, ದತ್ತಿನಿಧಿ ಮೂಲಕ ಪ್ರತಿವರ್ಷ ಅರ್ಹ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಸಹಾಯ ಧನ ವಿತರಿಸಲಾಗುತ್ತಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ನರೇಂದ್ರ ಬಾಳಾ ದೇಸಾಯಿ ಮಾತನಾಡಿ, ಕಾರವಾರದಲ್ಲಿ ನನ್ನ ತಾಯಿ ಸರೋಜಾ ಬಾಳಾ ದೇಸಾಯಿ ಅವರ ಹೆಸರಿನ ಟ್ರಸ್ಟ್ ಆರಂಭಿಸಿ ಬಡವರಿಗೆ ಸಹಾಯ ಧನ ವಿತರಿಸಿದ್ದೇನೆ. ದತ್ತಿನಿಧಿ ಸಮಿತಿಗೆ ನನ್ನ ತಾಯಿ ಹೆಸರಿನಲ್ಲಿ 55 ಸಾವಿರ ರೂ. ದೇಣಿಗೆ ನೀಡುತ್ತೇನೆ ಎಂದರು.

ಕೆಎಲ್‌ಇ ಬಿ ಎಡ್ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು. ಕರ್ನಾಟಕ ಸಂಘದ ಸದಸ್ಯ ವಿಠ್ಠಲದಾಸ ಕಾಮತ ಸ್ವಾಗತಿಸಿದರು. ಅಧ್ಯಕ್ಷ ಮಹಾಂತೇಶ ರೇವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಡಾ. ವಿನಾಯಕ ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ಮಹೇಶ ನಾಯಕ ಪರಿಚಯಿಸಿದರು. ಗೋವಿಂದ ನಾಯಕ, ಶಿಕ್ಷಕ ರಾಜೇಶ ಮಾಸ್ತರ, ಪತ್ರಕರ್ತ ಸುಭಾಷ ಕಾರೇಬೈಲ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net