

ಲೋಕಾಪುರ: ಗ್ರಾಮೀಣ ಭಾಗದ ಪಾರಿಜಾತ ಕಲೆ ಉಳಿಸಿ ಬೆಳೆಸುವಲ್ಲಿ ಕಲಾವಿದರು ಮುಂದಾಗಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ತಾಲೂಕು ಅಧ್ಯಕ್ಷ ಸಂಗಮೇಶ ನೀಲಗುಂದ ಹೇಳಿದರು.
ಪಟ್ಟಣದ ಶುಂಭುಲಿಂಗ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಮತ್ತು ವಲಯ ಘಟಕ ಹಾಗೂ ಕರ್ನಾಟಕ ಜಾನಪದ ಪರಿಷತ್ ತಾಲೂಕು ಮತ್ತು ವಲಯ ಘಟಕ ಸಹಯೋಗದಲ್ಲಿ ಶನಿವಾರ ಸಂಜೆ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಕಲಾವಿದರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಸನ್ಮಾನಿಸುವ ಕಾರ್ಯ ಮಾಡುತ್ತಿದೆ ಎಂದರು.
ತಬಲಾ ಕಲಾವಿದ ಗ್ಯಾನಪ್ಪ ಮಾದರ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಅವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆನಂದ ಪೂಜಾರಿ, ಕಜಾಪ ತಾಲೂಕು ಅಧ್ಯಕ್ಷ ರಮೇಶ ಅರಕೇರಿ, ನಿವೃತ್ತ ಶಿಕ್ಷಕ ಚಂದ್ರಕಾಂತ ರಂಗಣ್ಣವರ ಮಾತನಾಡಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ನಾರಾಯಣ ಪತ್ತಾರ, ಗ್ಯಾನಪ್ಪ ಮಾದರ ಹಾಗೂ ಕೃಷ್ಣಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆನಂದ ಪೂಜಾರಿ, ಕಜಾಪ ತಾಲೂಕು ಅಧ್ಯಕ್ಷ ರಮೇಶ ಅರಕೇರಿ, ಕಸಾಪ ವಲಯ ಘಟಕ ಅಧ್ಯಕ್ಷ ಎಸ್.ಎಂ. ರಾಮದುರ್ಗ, ನಿವೃತ್ತ ಶಿಕ್ಷಕ ಚಂದ್ರಕಾಂತ ರಂಗಣ್ಣವರ, ಡಾ. ಲೋಕಣ್ಣ ಭಜಂತ್ರಿ, ಪ್ರಭು ಹೊನವಾಡ, ಪ್ರವೀಣ ಗಂಗಣ್ಣವರ, ವಿಜಯಲಕ್ಷ್ಮೀ ಕುಂದರಗಿ, ಭಾಗ್ಯಶ್ರೀ ಪಾಟೀಲ, ಶಕುಂತಲಾ ಹುಲ್ಲನ್ನವರ, ಮಲ್ಲಿಕಾರ್ಜುನ ಬಟಕುರ್ಕಿ ಮತ್ತಿತರರಿದ್ದರು.