ಕನ್ನಡದೊಂದಿಗೆ ಅನ್ಯ ಭಾಷೆಗಳನ್ನು ಕಲಿಸಲಿ

UPBR JIRIGIVAD
Published on

ಉಪ್ಪಿನಬೆಟಗೇರಿ: ಪ್ರಾಮಾಣಿಕತೆಗೆ ಮಹತ್ವ ಕೊಡುತ್ತಿದ್ದ ಡಾ.ಸಿ.ವಿ. ರಾಮನ್ ಅವರು ದೇಶದ ಧೀಮಂತ ವಿಜ್ಞಾನಿಯಾಗಿದ್ದರು ಎಂದು ಬೆಂಗಳೂರು ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಹೇಳಿದರು.

ಧಾರವಾಡ ತಾಲೂಕಿನ ಜೀರಿಗಿವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವಾ ಗ್ರಾಮ ಜೀರಿಗವಾಡ ಹಾಗೂ ಧಾರವಾಡ ಶಾಲಾ ಶಿಕ್ಷಣ ಇಲಾಖೆಯವರು ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ಕ್ಷೇತ್ರದಲ್ಲಿ ಡಾ.ಸಿ.ವಿ. ರಾಮನ್ ಅವರು ಸಂಶೋಧನೆ ಮಾಡಿ ದೇಶಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಒಳ್ಳೆಯ ಮನಸಿನಿಂದ ಮಾಡಿದ ಕಾರ್ಯಗಳು ಹುಸಿಯಾಗದೆ ಯಶಸ್ವಿಯಾಗುತ್ತವೆ ಎನ್ನುವುದಕ್ಕೆ ರಾಮನ್ ಅವರ ಕಾರ್ಯವೇ ಸಾಕ್ಷಿಯಾಗಿದೆ. ಹಳ್ಳಿಯ ಮಕ್ಕಳು ಮುಗ್ಧತೆ ಜತೆಗೆ ಹೆಚ್ಚು ಸಂಸ್ಕಾರವಂತರಾಗಿರುತ್ತಾರೆ. ಜನಸಂಪರ್ಕದಿಂದ ಸಾಧನೆ ಸಾಧ್ಯವಾಗುತ್ತದೆ. ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಭವಿಷ್ಯದ ದೃಷ್ಟಿಯಿಂದ ಕನ್ನಡದ ಜೊತೆಗೆ ಅನ್ಯ ಭಾಷೆಗಳನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಡಾ.ಸಿ.ವಿ. ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಶಾಲಾ ಮಕ್ಕಳು ವಿಜ್ಞಾನದ ಪ್ರಯೋಗ, ವಸ್ತು ಪ್ರದರ್ಶನ ಚಿತ್ರಗಳನ್ನು ಪ್ರದರ್ಶಿಸಿದರು.

ಜೀರಿಗಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್​ಡಿಎಂಸಿ ಅಧ್ಯಕ್ಷ ಶಂಕ್ರಪ್ಪ ಹಕ್ಕಿ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಆರ್. ಸದಲಗಿ, ಟಾಟಾ ಧಾರವಾಡ ಹಿಟಾಚಿ ಹೆಡ್ ಅಡ್ಮಿನ್ ಪ್ರಶಾಂತ ದಿಕ್ಷೀತ, ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್., ಗ್ರಾಮೀಣ ಬಿಆರ್​ಪಿ ಎಸ್.ವಿ. ಸಂತಿ, ಗರಗ ಪಿಎಸ್​ಐ ಸಿದ್ರಾಮಪ್ಪ ಉನ್ನದ, ಗ್ರಾಪಂ ಸದಸ್ಯರಾದ ಪ್ರಭಾಕರ ದೇಶಪಾಂಡೆ, ಗೀತಾ ಗೋವನಕೊಪ್ಪ, ಚಂದ್ರಶೇಖರಯ್ಯ ಹಿರೇಮಠ, ರುದ್ರೇಶ ಕುರ್ಲಿ, ಶಾಯಿಸ್ತಾ ನದಾಫ್, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net