

ಮೈಸೂರು: ಮುಂದಿನ ನಾಯಕತ್ವದ ವಿಚಾರವಾಗಿ ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ. ಪಕ್ಷದಿಂದ ನೋಟೀಸ್ ಬಂದಾಗ ನೋಡಿಕೊಳ್ಳೋಣ ಬಿಡಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಕಾಂಗ್ರೆಸ್‌ನ ಮುಂದಿನ ನಾಯಕತ್ವ ಕುರಿತು ನೀಡಿರುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ನಾನು ನೀಡಿರುವ ಹೇಳಿಕೆಯಲ್ಲಿ ತಪ್ಪೇನಿಲ್ಲ. ಆದರೆ ನನ್ನ ಹೇಳಿಕೆಯನ್ನು ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ ಎಂದು ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ನಾನು ಏನು ಹೇಳಬೇಕೋ ಅದನ್ನು ಹೇಳಿಯಾಗಿದೆ. ಅನಗತ್ಯವಾಗಿ ಮತ್ತೆ ಅದನ್ನೇ ಮಾತನಾಡಿ ವಿವಾದ ಸೃಷ್ಟಿ ಮಾಡುವುದಿಲ್ಲ. ನನ್ನ ಹೇಳಿಕೆ ವಿವಾದ ಪಡೆದ ಕ್ಷಣವೇ ಅದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಮಾಧ್ಯಮದ ಮುಂದೆ ಮತ್ತೆ ಏನೂ ಮಾತನಾಡುವುದಿಲ್ಲ ಎಂದರು.
ಈ ವಿಚಾರದ ಬಗ್ಗೆ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ. ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ಒಳಗೆ ಮಾತನಾಡುತ್ತೇನೆ. ಈ ವಿಚಾರವಾಗಿ ಪಕ್ಷದಿಂದ ನೋಟೀಸ್ ಬಂದಾಗ ನೋಡಿಕೊಳ್ಳೋಣ ಬಿಡಿ. ಪಕ್ಷ ನನಗೆ ನೋಟಿಸ್ ಕೊಟ್ಟರೆ ಸೂಕ್ತ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಈಗಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ ಯಾವುದೂ ಇಲ್ಲ. ಕೇವಲ ಊಹಾಪೋಹ ಅಷ್ಟೇ ಎಂದರು.