

ಅಥಣಿ: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಮತ್ತು ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ಧಕ್ಕೆ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಯುವ ಮುಖಂಡ ಚಿದಾನಂದ ಸವದಿ ಆಗ್ರಹಿಸಿದರು.
ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ಬದುಕನ್ನು ಸಮಾಜಕ್ಕೆ ಅರ್ಪಿಸಿಕೊಂಡಿರುವ ಡಾ. ಹೆಗ್ಗಡೆ ಕುಟುಂಬದ ಕೊಡುಗೆ ಅಪಾರವಾಗಿದೆ. ಅವರಿಗೆ ನೋವಾಗದಂತೆ ಎಚ್ಚರವಹಿಸಬೇಕು ಎಂದರು.
ಹಿರಿಯರಾದ ಅರುಣ ಯಲಗುದ್ರಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಹಲವಾರು ವರ್ಷಗಳಿಂದ ಅಪಪ್ರಚಾರ ಮಾಡುತ್ತಿರುವ ಮಹೇಶಶೆಟ್ಟಿ ತಿಮರೋಡಿ, ಗಿರೀಶ ಮಟ್ಟ್ಟೆನ್ನವರ, ಸಮೀರ್, ಸಂತೋಷ ಶೆಟ್ಟಿ, ಜಯಂತ ಹಾಗೂ ಇನ್ನಿತರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ಉಪತಹಸೀಲ್ದಾರ್ ಎಸ್.ವೈ.ಹೊಸಕೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಹಿರಿಯರಾದ ಅರವಿಂದ ದೇಶಪಾಂಡೆ, ಉಮೇಶರಾವ ಬಂಟೋಡ್ಕರ, ಎಸ್.ಕೆ.ಬುಟಾಳಿ, ಸಂಜಯ ತಳವಲಕರ, ರಾಜು ನಾಡಗೌಡ, ಅಮರ ದುರ್ಗಣ್ಣವರ, ಸಿದ್ದಾರ್ಥ ಸಿಂಗೆ ಪ್ರತಿಭಟನೆಯಲ್ಲಿ ಇದ್ದರು.