

ಬಂಗಾರಪೇಟೆ: ಪಟ್ಟಣದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸೆನ್ ಬಾವುಟ ಪ್ರದರ್ಶಿಸಿ ಸಮಾಜದಲ್ಲಿ ಅಶಾಂತಿಗೆ ಯತ್ನಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಮತ್ತು ಹಿಂದು ಜಾಗರಣ ವೇದಿಕೆ ಮುಖಂಡರು ತಾಲೂಕಿನ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಮಾತನಾಡಿ, ಜಿಲ್ಲೆಯ ಜನತೆ ಶಾಂತಿ, ಸೌಹಾರ್ದತೆ, ಮತ್ತು ಭ್ರಾತೃತ್ವದ ತಳಹದಿಯ ಮೇಲೆ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ವಿಕೃತ ಮತಾಂಧ ಉಗ್ರವಾದಿಗಳು ಜಿಲ್ಲೆಯಲ್ಲಿ ಶಾಂತಿ ಕದಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಶ್ವ ಹಿಂದು ಪರಿಷತ್ ಮುಖಂಡ ಶಿಂಧೆ ಮಾತನಾಡಿ, ದೇಶದ ಆಂತರಿಕ ಉಗ್ರಗಾಮಿ ಪ್ರಚೋದಿತ ಪುಂಡರು ಈದ್ ಮಿಲಾದ್ ವೇಳೆ ಅನ್ಯ ದೇಶದ ಧ್ವಜ ಪ್ರದರ್ಶಿಸಿ ದೇಶದ್ರೋಹಿ ಕೃತ್ಯ ಎಸಗಿದ್ದಾರೆ. ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಜರಂಗದಳ ಮಹೇಶ್ ಮಾತನಾಡಿ, ಉಗ್ರಗಾಮಿ ಕೃತ್ಯಗಳು ದೇಶಕ್ಕೆ ಮಾರಕವಾಗಿದ್ದು, ಇದನ್ನು ಪ್ರಾರಂಭಿಕ ಹಂತದಲ್ಲೇ ತಡೆಯುವುದು ಒಳಿತು. ಇತ್ತೀಚಿನ ದಿನಗಳಲ್ಲಿ ಪೊಲೀಸರೆಂದರೆ ಭಯವಿಲ್ಲದಂತಾಗಿದೆ. ಈದ್ಮಿಲಾದ್ ವೇಳೆ ಪೊಲೀಸರ ಮೇಲೆ ಅಪ್ರಚೋದಿತವಾಗಿ ಏಕಾಏಕಿ ಎರಗಿ ಮಾತಿನ ಚಕಮಕಿ ನಡೆಸಿದ್ದಾರೆ. ಪೊಲೀಸರ ಸಮಕ್ಷಮದಲ್ಲಿ ಪ್ಯಾಲೆಸೆನ್ ಧ್ವಜ ಹಾರಿಸಿ ಕೋಮು ಸೌಹಾರ್ದತೆ ಕದಡಿದ್ದಾರೆ. ಇಂಥವರ ಹಿಂದೆ ಕಾಣದ ದುಷ್ಟ ಉಗ್ರವಾದಿ ಸಂಘಟನೆಗಳ ಬೆಂಬಲ ಇರಬಹುದೆಂಬ ಸಂಶಯ ಇದ್ದು, ಕೂಡಲೇ ಪೊಲೀಸ್ ಇಲಾಖೆ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.