

ಚಳ್ಳಕೆರೆ: ಗೊಲ್ಲ ಸಮುದಾಯ ಶೈಕ್ಷಣಿಕ ಕ್ಷೇತ್ರಕ್ಕೆ ಆದ್ಯತೆ ಜತೆಗೆ ಪ್ರಗತಿಪರ ಬದಲಾವಣೆಯತ್ತ ಹೆಜ್ಜೆ ಹಾಕುವುದು ತುತು ಅನಿವಾರ್ಯ ಎಂದರು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕು ಕಾಡುಗೊಲ್ಲರ ಸಂಘ ನಗರದ ಗೊಲ್ಲರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮೂಢನಂಬಿಕೆ ಹೊರತಾಗಿ ಬದಲಾವಣೆ ಕಂಡುಕೊಳ್ಳಬೇಕಿದೆ. ಗೊಲ್ಲರು ಸೇರಿ ವಿವಿಧ ಸಮುದಾಯಗಳಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ, ಬಾಣಂತಿಯರನ್ನು ಊರ ಹೊರಗೆ ಇಡುವಂತಹ ಮೌಢ್ಯ ಆಚರಣೆಗಳು ನಿಲ್ಲಬೇಕು. ಇದರಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಅರಿತುಕೊಳ್ಳಬೇಕು ಎಂದರು.
ಸಮಾಜಮುಖಿಯಾಗಿ ಬದುಕು ರೂಪಿಸಿಕೊಳ್ಳಲು ಶಿಕ್ಷಣ, ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯದ ಅಧಿಕಾರ ಶಾಶ್ವತವಲ್ಲ. ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರನ್ನಾಗಿ ಚುನಾಯಿತನಾಗಲು ಗೊಲ್ಲ ಸಮುದಾಯ ಸೇರಿ ಎಲ್ಲ ವರ್ಗದ ಜನರ ಪರಿಶ್ರಮ ಇದೆ ಎಂದು ಸ್ಮರಿಸಿದರು.
ರಾಜಕೀಯ ರಂಗದಲ್ಲಿ ಟೀಕೆ-ಟಿಪ್ಪಣಿ ಇರುವ ರೀತಿ ವಿರೋಧಗಳು ಇರುತ್ತವೆ. ಚುನಾವಣೆ ಬಳಿಕ ಅದೆಲ್ಲವನ್ನೂ ಮರೆತು ಕ್ಷೇತ್ರದ ಅಭಿವೃದ್ಧಿಗೆ, ಸರ್ವ ಸಮುದಾಯದ ಪ್ರಗತಿಗೆ ಆದ್ಯತೆ ನೀಡುವುದು ಚುನಾಯಿತರ ಹೊಣೆಗಾರಿಕೆ ಎಂದರು.
ಗೊಲ್ಲರ ಸಂಘದ ತಾಲೂಕಾಧ್ಯಕ್ಷ, ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ್ ಮಾತನಾಡಿ, ಸಮುದಾಯದ ಸಾಮಾಜಿಕ ಕಾರ್ಯ ಚಟುವಟಿಕೆಗಳ ಅನುಕೂಲಕ್ಕೆ ಪಾವಗಡ ರಸ್ತೆಯಲ್ಲಿ 5 ಎಕರೆ ಜಮೀನು ಮಂಜೂರಾತಿ ಮಾಡಬೇಕು. ಪುರ‌್ಲೆಹಳ್ಳಿ ಸಮೀಪ ನಡೆಯುತ್ತಿರುವ ಐತಿಹಾಸಿಕ ಕ್ಯಾತಪ್ಪನ ಪರಿಷೆಗೆ ಜಾಗದ ಅನುಕೂಲ ಆಗಬೇಕು. ಅಪೂರ್ಣಗೊಂಡಿರುವ ಶ್ರೀಕೃಷ್ಣ ಭವನ ಕಾಮಗಾರಿ ಪೂರ್ಣಗೊಳಿಸಬೇಕು. ಶೈಕ್ಷಣಿಕ ಅನುಕೂಲಕ್ಕೆ ಕಾಡುಗೊಲ್ಲರ ಜಾತಿ ಪ್ರಮಾಣ ಪತ್ರ ಕೊಡಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಕಾಡುಗೊಲ್ಲರ ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ, ಜಿಪಂ ಮಾಜಿ ಅಧ್ಯಕ್ಷೆ ಶಾಂತಮ್ಮ, ಮುಖಂಡರಾದ ಬಿ.ವಿ.ಸಿರಿಯಣ್ಣ, ಕರಿಯಪ್ಪ, ವಕೀಲ ಶಶಿಧರ, ಶ್ರೀಕಂಠಪ್ಪ, ಮೂಡಲಗಿರಿಯಪ್ಪ, ಚಾರುಮತಿ, ಚಿತ್ರಾವತಿ, ಸಣ್ಣಕ್ಕ, ಕಾಂತರಾಜ, ಸುರೇಶ್ ಮತ್ತಿತರರು ಇದ್ದರು.