ವೇದ ಪರಂಪರೆ ಸಮೃದ್ಧವಾಗಿ ಬೆಳೆಯುವ ಪ್ರಯತ್ನವಾಗಲಿ

RAGHAVESHWAR SHREE
Published on

ಗೋಕರ್ಣ: ಇದೇ ಮೊದಲ ಬಾರಿಗೆ ಚಾತುರ್ವಸ್ಯ ಪರ್ವದಲ್ಲಿ ಅವಿರತವಾಗಿ ನಾಲ್ಕು ವೇದಗಳ ಸ್ವಾಹಾಕಾರ ಮತ್ತು ವೇದ ಪಾರಾಯಣಗಳು ಯಥೋಚಿತವಾಗಿ ಸಂಪನ್ನಗೊಂಡಿವೆ. ಈ ಮೂಲಕ ಅಶೋಕೆಯಲ್ಲಿ ಅಗ್ನಿಹೋತ್ರ, ಶ್ರೌತಯಜ್ಞಾದಿ ಸನಾತನ ವೇದ ಪರಂಪರೆಗಳು ಹಿಂದಿನಂತೆ ಮತ್ತೆ ಸಮೃದ್ಧವಾಗಿ ಬೆಳೆಯುವ ಪ್ರಯತ್ನವಾಗಬೇಕು ಎಂದು 32ನೇ ಸ್ವಭಾಷಾ ಚಾತುರ್ವಸ್ಯದ 58ನೇ ದಿನವಾದ ಶುಕ್ರವಾರ ಚಾತುರ್ವಸ್ಯದಲ್ಲಿ ಆಯೋಜಿತವಾದ ವಿವಿಧ ವೈದಿಕ ಮಹಾಕಾರ್ಯಗಳಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಸಂಪನ್ನಗೊಳಿಸಿದ ಸರ್ವ ವೈದಿಕರು, ವೇದ ಘನಪಾಠಿಗಳು ಮತ್ತು ಶಿಷ್ಯರನ್ನು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವದಿಸಿದರು.

ಚಾತುರ್ವಸ್ಯ ವೇದ ಕಾರ್ಯಗಳಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿದ ವೇದವಿದ್ವಾಂಸರು ಭವಿಷ್ಯ ಯುಗದ ವೇದ ಪರಂಪರೆಯ ಬೀಜಗಳಾಗಿದ್ದಾರೆ. ಇಂಥವರನ್ನು ಸಮೃದ್ಧವಾಗಿ ಬೆಳೆಸುವ ಮೂಲಕ ವೇದಗಳ ಪುನರುತ್ಥಾನಕ್ಕೆ ಸಮಾಜ ಪಣ ತೊಡಬೇಕು. ಸಮಾಜ ಇವರ ಮಹತ್ವವನ್ನು ಅರ್ಥೈಸಿಕೊಂಡು ನಮ್ಮ ಶಿವಗುರುಕುಲಕ್ಕೆ ಅಧ್ಯಯನಾರ್ಥ ಮಕ್ಕಳನ್ನು ಕಳಿಸುವಂತಾಗಬೇಕು. ಆಗ ಮಾತ್ರ ಗುರುಕುಲದ ಸ್ಥಾಪನೆಯ ಉದ್ದೇಶ ಸಾಕಾರವಾಗುವ ಜೊತೆಗೆ ವೇದ ಘನಪಾಠಿಗಳು ಲೋಕಕ್ಕೆ ದೊರಕುವ ಅವಕಾಶ ತೆರೆದುಕೊಳ್ಳಲು ಸಾಧ್ಯ. ಮುಂದೊಂದು ದಿನ ಸಮಾಜದಲ್ಲಿ ವೇದವರ್ಗದ ವಿದ್ವಾಂಸರಿಗೆ ದೊಡ್ಡ ಮಹತ್ವ ಒದಗಿ ಬರುವುದು ನಿಶ್ಚಿತ. ಈ ಮೂಲಕ ಈ ಹಿಂದಿನ ಸಮೃದ್ಧವಾದ ವೇದ ಪರಂಪರೆಯ ಗತ ವೈಭವಗಳು ಮತ್ತೆ ಪುನರ್ ಪ್ರತಿಷ್ಠಾಪಿಸುವಂತಾಗಬೇಕು ಎಂದು ಶ್ರೀಗಳು ಅನುಗ್ರಹವಿತ್ತರು.

ಐಡಿಯಾ ಹೊರ ಹೋಗಲಿ

ಶುಕ್ರವಾರ ಇಂಗ್ಲಿಷ್​ನ ಐಡಿಯಾ ಪದ ಹೊರಹಾಕಲು ಶ್ರೀಗಳು ಆಗ್ರಹಿಸಿದರು. ಇದರ ಜಾಗದಲ್ಲಿ ಅಚ್ಚ ಕನ್ನಡದ ಉಪಾಯ, ಹೊಳಹು, ವಿಚಾರ, ಕಲ್ಪನೆ, ಎಣಿಕೆ, ಆಲೋಚನೆ ಮತ್ತಿತ್ಯಾದಿ ವಿಫುಲವಾಗಿರುವ ಸ್ವಭಾಷಾ ಪದಗಳ ಬಳಕೆಗೆ ಗುರುವರ್ಯರು ಸೂಚನೆ ನೀಡಿದರು. ಶ್ರೀಮಠದ ಶಾಸ್ತ್ರಿಗಳಾದ ಸುಚೇತನ ಘನಪಾಠಿಗಳು ವೇದ ಪಾರಾಯಣ ಮತ್ತು ಘನಪಾಠದ ವಿಶೇಷಗಳನ್ನು ತಿಳಿಸಿದರು. ಘನ ಪಾರಾಯಣವನ್ನು ಘನವಿದ್ವಾಂಸರಾದ ವೇ. ಸುಚೇತನ ಭಟ್ಟ,ವೇ.ಮಹಾಬಲೇಶ್ವರ ಶಂಕರಲಿಂಗ, ವೇ.ರಾಧಾಕೃಷ್ಣ ಭಟ್ಟ, ವೇ.ದತ್ತಾತ್ರೇಯ ಭಟ್ಟ,ವೇ. ಶ್ರೀಹರನ್ ರಾಮನಾಥ ಶರ್ವ, ವೇ.ವಿಘ್ನೕಶ ಕೃಷ್ಣನ್ ಶರ್ವ, ವೇ.ಮಂಜುನಾಥ ಭಟ್ಟ ನಡೆಸಿಕೊಟ್ಟರು. ಬೆಂಗಳೂರಿನ ಹರ್ಷಕೃಷ್ಣ ಭಟ್ಟ ದಂಪತಿಯಿಂದ ಸರ್ವಸೇವೆ ನೆರವೇರಿತು.

ನೂತನ ನಿಯುಕ್ತಿ:

ನೂತನವಾಗಿ ಅಶೋಕ ಲೋಕದ ವ್ಯವಸ್ಥಾಪರಿಷತ್ ಅಧ್ಯಕ್ಷರಾಗಿ ಶ್ರೀಕಾಂತ ಪಂಡಿತ, ನಿರ್ವಿುತಿ ಪರಿಷತ್ ಅಧ್ಯಕ್ಷರಾಗಿ ವಿನಾಯಕ ಹೆಗಡೆಕಟ್ಟಾ, ವಿದ್ಯಾಪರಿಷತ್ ಅಧ್ಯಕ್ಷರಾಗಿ ಡಾ.ಜಿ.ಎಲ್. ಹೆಗಡೆ ನಿಯುಕ್ತರಾದರು. ಧರ್ಮಸಭೆಯಲ್ಲಿ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಭಟ್ಟ, ಧಾರವಾಡ ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಯಲ್ಲಪ್ಪ ಅಕ್ಕಿ ಶ್ರೀಗಳ ದರ್ಶನಾಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಪ್ರ.ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ಆಡಳಿತಾಧಿಕಾರಿ ಡಾ.ಪ್ರಸನ್ನಕುಮಾರ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net