

ವಿಜಯಪುರ: ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ನಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಜಿಪಂ ಸಿಇಒ ರಿಶಿ ಆನಂದ ಹೇಳಿದರು.
ನಗರದ ಜಿಪಂ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯ ಎಲ್ಲ ತಾಪಂ ಇಒಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಕುರಿತು ಭಿತ್ತಿ ಪತ್ರಗಳು, ಬ್ಯಾನರ್‌ಗಳು, ಜಿಂಗಲ್ಸ್, ಸೆಲ್ಫಿಸ್ಟ್ಯಾಂಡ್‌ಗಳು ಹಾಗೂ ಇತರೆ ಸಾಮಗ್ರಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಶೇ.100ರಷ್ಟು ಮತದಾನ ಗುರಿ ಮುಟ್ಟಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ. ಗ್ರಾಮೀಣ ಮಟ್ಟದಲ್ಲಿ ಅನೇಕ ಜನರು ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿರುತ್ತಾರೆ. ಅಂಥವರ ಕರೆ ಮಾಡುವ ಮೂಲಕ ಸಂಪರ್ಕಿಸಿ ಅವರಿಗೂ ಮತದಾನದ ಕುರಿತು ಮಾಹಿತಿ ನೀಡಿ ಮತದಾನದಲ್ಲಿ ಭಾಗಿಯಾಗಲು ಪ್ರೇರೇಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
‘ಚುನಾವಣಾ ಪರ್ವ ದೇಶದ ಗರ್ವ, ಮತದಾನ ನಮ್ಮೆಲ್ಲರ ಹಕ್ಕು, ಮತದಾನ ಮಾಡಿದವನೇ ಮಹಾಶೂರ’ ಎಂಬ ಘೋಷಣೆ ಮೊಳಗಿಸಲಾಯಿತು.
ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಯೋಜನಾ ನಿರ್ದೇಶಕ ಸಿ.ಆರ್. ಮುಂಡರಗಿ ಮತ್ತಿತರರಿದ್ದರು.