

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಆತಿಥ್ಯದಲ್ಲಿ ಅಕ್ಟೋಬರ್-2023ರಲ್ಲಿ ಜರುಗಲಿರುವ ಅಂತಾರಾಷ್ಟ್ರೀಯ ಲಾನ್ ಟೆನಿಸ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರದ ಕೀರ್ತಿ ಹೆಚ್ಚಿಸೋಣ. ಈ ಪಂದ್ಯಾವಳಿಗೆ ಸರ್ಕಾರದಿಂದ ಮತ್ತು ವೈಯಕ್ತಿಕ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಕ್ರೀಡಾಂಗಣದ ರಾಜ್ಯಾಧ್ಯಕ್ಷ ಪೆವಿಲಿಯನ್‌ನಲ್ಲಿ ಕಲ್ಪಿಸಿರುವ ನೂತನ ಸೌಲಭ್ಯಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗರವು ಶೈಕ್ಷಣಿಕ ಕಾಶಿಯೊಂದಿಗೆ ಕ್ರೀಡಾಕ್ಷೇತ್ರದ ಪ್ರತಿಭಾವಂತರಿಗೆ ಉತ್ತಮ ಸೌಲಭ್ಯ ನೀಡುವ ನೆಲೆಯಾಗಿದೆ. ಇಲ್ಲಿ ವಿದ್ಯಾ ದಾನದೊಂದಿಗೆ ವಿವಿಧ ಕ್ರೀಡೆಗಳನ್ನು ಮಕ್ಕಳಿಗೆ, ಆಸಕ್ತರಿಗೆ ಕಲಿಸಲಾಗುತ್ತಿದೆ. ಇಂತಹ ತರಬೇತಿ ಸಂಸ್ಥೆಗಳಲ್ಲಿ ಲಾನ್ ಟೆನಿಸ್ ಸಂಸ್ಥೆಯೂ ಒಂದು. 17 ವರ್ಷಗಳ ನಂತರ ಅಂತಾರಾಷ್ಟ್ರೀಯ ಮಟ್ಟದ ಲಾನ್ ಟೆನಿಸ್ ಪಂದ್ಯಾವಳಿ ಆಯೋಜಿಸುವ ಅವಕಾಶ ಸಿಕ್ಕಿದೆ. ಇದನ್ನು ಬಳಸಿಕೊಂಡು ಪಂದ್ಯಾವಳಿ ಯಶಸ್ವಿಗೊಳಿಸುವುದರೊಂದಿಗೆ ಧಾರವಾಡ ವಿಶೇಷತೆ, ಇಲ್ಲಿನ ಸಾಧಕರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಲು ಪ್ರಯತ್ನಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಧಾರವಾಡದಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಕ್ರೀಡಾ ಸೌಕರ್ಯ, ಕ್ರೀಡಾ ಸಂಕಿರ್ಣಗಳನ್ನು ಹೆಚ್ಚಿಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಹಿರಿಯ ಅಧಿಕಾರಿ ಇಬ್ರಾಹಿಂ ಮೈಗೂರ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ಇತರರು ಇದ್ದರು. ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ವಾಗತಿಸಿದರು. ಸಂದೀಪ ಬಣವಿ ನಿರೂಪಿಸಿದರು.