

ಮೈಸೂರು: ಗೌರಿ-ಗಣೇಶ ಹಬ್ಬದ ಅಂಗವಾಗಿ ಮಾಧವ ಕೃಪಾ ಗಣೇಶೋತ್ಸವ ಸಮಿತಿ, ಶ್ರೀ ಜನಜಾಗರಣ ಟ್ರಸ್ಟ್ , ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಕಾಮಾಕ್ಷಿ ಆಸ್ಪತ್ರೆ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಮ್ಯಾರಥಾನ್ ಆಯೋಜಿಸಲಾಗಿತ್ತು.
‘ಮಾದಕ ವಸ್ತುಗಳನ್ನು ನಿಲ್ಲಿಸೋಣ, ಜಾಗೃತರಾಗಿರೋಣ’ ಘೋಷ ವಾಕ್ಯದೊಂದಿಗೆ ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭವಾಯಿತು.
ಮ್ಯಾರಥಾನ್‌ಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿ ಮಾತನಾಡಿ, ಮೈಸೂರಿನಲ್ಲಿ ಇತ್ತೀಚೆಗೆ ಡ್ರಗ್ಸ್ ತಯಾರಿಕಾ ಘಟಕ ಕಂಡು ಬಂದಿರುವುದು ತೀವ್ರ ಕಳವಳಕಾರಿಯಾಗಿದ್ದು, ಈ ಪಿಡುಗಿನ ವಿರುದ್ಧ ಹೋರಾಡುವಲ್ಲಿ ಎಲ್ಲರೂ ಜಾಗರೂಕರಾಗಿ ಮತ್ತು ಒಗ್ಗಟ್ಟಿನಿಂದ ಇರುವ ಸಂಕಲ್ಪ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಿದೆ. ದೇಶದ ಆಸ್ತಿಯಾಗಿರುವ ಯುವ ಜನಾಂಗ ದೈಹಿಕ ಸದೃಢತೆ ಮತ್ತು ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಮುಖ್ಯ. ಆರೋಗ್ಯ ಕಾಪಾಡಿಕೊಳ್ಳುವ ಕಾರ್ಯಕ್ರಮ ನಮ್ಮ ದೈನಂದಿನ ಜೀವನದ ಭಾಗವಾಗಿರಬೇಕು. ಇದರ ಮೂಲಕ ನಾಳಿನ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮಾಧವ ಕೃಪಾದ 38ನೇ ಗಣೇಶೋತ್ಸವದ ಅಂಗವಾಗಿ ಪ್ರತಿವರ್ಷ ಒಂದೊಂದು ಘೋಷವಾಕ್ಯದೊಂದಿಗೆ ವಿವಿಧ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ವರ್ಷ 3 ಹಾಗೂ 5 ಕಿ.ಮೀ. ದೂರದ ಮ್ಯಾರಥಾನ್ ನಡೆಸಲಾಗುತ್ತಿದೆ. ಯುವ ಜನಾಂಗ ಮಾದಕ ವಸ್ತು ಸೇರಿದಂತೆ ದುಶ್ಚಟಗಳಿಂದ ದೂರವಿದ್ದು, ದೇಶಕ್ಕೆ ಆಸ್ತಿ ಆಗಬೇಕು ಎಂದರು.
ಎರಡು ವಿಭಾಗದಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ವಿವಿಧ ವಯೋಮಾನದ ಸಾವಿರಕ್ಕೂ ಹೆಚ್ಚು ಉತ್ಸಾಹಿ ಓಟಗಾರರು ಮಾದಕ ದ್ರವ್ಯಮುಕ್ತ ಸಮಾಜ ನಿರ್ಮಿಸುವ ಸಂದೇಶ ಸಾರಿದರು. ಸಾಧನೆ ತೋರಿದವರಿಗೆ ಪ್ರಮಾಣಪತ್ರ ಹಾಗೂ ಪದಕ ವಿತರಿಸಲಾಯಿತು.
ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿ ಮಹೇಶ್ ಶೆಣೈ, ಮಕ್ಕಳ ತಜ್ಞ ಡಾ.ಯು.ಜಿ. ಶೆಣೈ, ಆಸ್ಪತ್ರೆಯ ಜಂಟಿ ವ್ಯವಸ್ಥಾಪಕ ಟ್ರಸ್ಟಿ ಎಂ. ಗಜಾನನ ಶೆಣೈ, ಟ್ರಸ್ಟಿ ಎಂ. ಮನೋಜ್ ಶೆಣೈ, ಮಾಧವ ಕೃಪಾ ಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ. ಲಕ್ಷ್ಮೀ ನರಸಿಂಹನ್, ಮಾಧವ ಕೃಪಾ ಗಣೇಶೋತ್ಸವದ ಸಂಯೋಜಕ ಚರಣ್ ಶಿವರಾಜ್, ವೈದ್ಯರಾದ ಡಾ. ಪ್ರಕಾಶ್ ಪ್ರಭು, ಡಾ. ರೂಪಾ ಪ್ರಕಾಶ್, ಡಾ. ಗೋವಿಂದರಾಜ್, ಶ್ರುತಿ ಅಶೋಕ್ ಇತರರು ಇದ್ದರು.