

ಅಥಣಿ ಗ್ರಾಮೀಣ: ಸರ್ಕಾರದ ಸಹಾಯಧನ ಪಡೆಯದೆ ಯಕ್ಕಂಚಿ ಗ್ರಾಮಸ್ಥರೇ ಸೇರಿಕೊಂಡು 40 ಲಕ್ಷ ರೂ. ವೆಚ್ಚದಲ್ಲಿ ಚಮಕೇರಿ ಸದಾಶಿವ ಶಿವಯೋಗಿಶ್ವರ ಮಠದ ಮಹಾದ್ವಾರ ನಿರ್ಮಿಸಿದ್ದು ಶ್ಲಾಘನೀಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ ಭಾನುವಾರ ಚಮಕೇರಿ ಸಂಪರ್ಕ ರಸ್ತೆಗೆ ನಿರ್ಮಿಸಲಾದ ಗುರು ಚಕ್ರವರ್ತಿ ಸದಾಶಿವ ಶಿವಯೋಗಿಶ್ವರಮಠದ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಶ್ರೇಷ್ಠವಾದುದು. ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಜಾಗತಿ ಮೂಡಿಸಬೇಕು. ಗ್ರಾಮದ ಎಲ್ಲ ವಿದ್ಯಾರ್ಥಿಗಳು ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಪರಸ್ಪರ ಗೌರವಿಸುವ ಭಾವನೆ ಬೆಳೆಸಿಕೊಳ್ಳಬೇಕು. ಅಂದಾಗ ಸುಖಮಯ ಜೀವನ ಸಾಗಿಸಲು ಸಾಧ್ಯ ಎಂದು ತಿಳಿಸಿದರು,
ಚಮಕೇರಿಯ ಗುರುಚಕ್ರವರ್ತಿ ಶಿವಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯಕ್ಕಂಚಿಯ ಗುರುಪಾದ ಸ್ವಾಮೀಜಿ ಮಾತನಾಡಿದರು. ಮಲ್ಲಯ್ಯ ಪೂಜಾರಿ, ಮಹಾದೇವ ಹೊಕ್ಕುಂಡಿ, ವಿಠೋಬಾ ನಾಗನೂರ, ಸೈಬಣ್ಣ ಕಮತಗಿ, ತುಕಾರಾಮ ಗೊಂದಳೆ, ಶಿವಯ್ಯ ಪೂಜಾರಿ, ಅಡಿವೆಪ್ಪ ಪಿಡಶೆಟ್ಟಿ, ಭೀಮಗೌಡ ಪಾಟೀಲ, ದುರ್ಗಪ್ಪ ಗೊಂದಳೆ, ಭೀಮಪ್ಪ ಹೊಕ್ಕುಂಡಿ ಇತರರಿದ್ದರು.