

ಹಗರಿಬೊಮ್ಮನಹಳ್ಳಿ: ತಾಲೂಕಿನ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಏಳು ಗಂಟೆ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಪಟ್ಟಣದ ಜೆಸ್ಕಾಂ ಇಇ ಸತೀಶ್ ಮತ್ತು ಎಇಇ ಭಾಸ್ಕರ್ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ವಿಭಾಗೀಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಮಾತನಾಡಿ, ಸರ್ಕಾರದ ಆದೇಶದಂತೆ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಲೇಬೇಕು. ಈಗಾಗಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಅಲ್ಲದೇ, ತಾಲೂಕಿನ ತಂಬ್ರಹಳ್ಳಿಯ ವಿತರಣಾ ಕೇಂದ್ರದಲ್ಲಿ ಎಂವಿಎಯನ್ನು ಮೇಲ್ದರ್ಜೆಗೇರಿಸಬೇಕು. ಕೋಡಿಹಳ್ಳಿ ಮತ್ತು ತೆಲುಗೋಳಿಯಲ್ಲಿ ವಿತರಣಾ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ತೋಟದ ಮನೆಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಬೇಕೆಂದು ಮನವಿ ಪತ್ರ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ. ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡುತ್ತಿದ್ದು, ಅಷ್ಟರೊಳಗೆ ಎಲ್ಲ ಬೇಡಿಕೆಗಳು ಈಡೇರಿಸಬೇಕು. ಮತ್ತದೇ ನಿರ್ಲಕ್ಷ್ಯ ವಹಿಸಿದರೆ ಏ.4 ರಿಂದ ಎರಡು ದಿನ ಪ್ರತಿಭಟನೆ ಹಾಗೂ 7ರಂದು ಕಚೇರಿಗೆ ಮುತ್ತಿಗೆ ಹಾಕುವುದು ಖಚಿತ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ತಂಬ್ರಹಳ್ಳಿ ರವಿಕುಮಾರ್ ಮಾತನಾಡಿ, ಪಂಪ್‌ಸೆಟ್‌ಗಳ ಒತ್ತಡಕ್ಕೆ ತಕ್ಕಂತೆ ಇಲಾಖೆಯಿಂದ ರೈತರಿಗೆ ಪರಿವರ್ತಕಗಳನ್ನು ಅಳವಡಿಸಿಕೊಡಬೇಕು. ಐದು ವರ್ಷಗಳಿಂದ ನಡೆಯದ ಅಕ್ರಮ-ಸಕ್ರಮ ಯೋಜನೆಯ ಪರಿವರ್ತಕಗಳನ್ನು ಅಳವಡಿಸುವ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.