ಜಾತಿಗಣತಿಯಲ್ಲಿ ಒಗ್ಗಟ್ಟು ಪ್ರದರ್ಶಿಸಲಿ

21 HKR 01 bcpatil
Published on

ಹಿರೇಕೆರೂರ: ರಾಜ್ಯದಲ್ಲಿ ಸೋಮವಾರದಿಂದ ಜಾತಿಗಣತಿ ಆರಂಭಗೊಳ್ಳುತ್ತಿದ್ದು, ಧರ್ಮದ ಕಾಲಂನಲ್ಲಿ ಏನು ಬರೆಸಬೇಕು ಎಂಬುದು ಲಿಂಗಾಯತರಲ್ಲಿ ಗೊಂದಲಮಯವಾಗಿದೆ. ನಮ್ಮ ಜಾತಿಯವರನ್ನು ಒಡೆಯುವ ತಂತ್ರ ಇದರಲ್ಲಿ ಅಡಗಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಲಿಂಗಾಯತರು ಮಣೆ ಹಾಕಬಾರದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವೀರಶೈವ-ಲಿಂಗಾಯತ ಎರಡು ಒಂದೆ. ವಿನಾಕಾರಣ ವೀರಶೈವ ಮತ್ತು ಲಿಂಗಾಯತ ಎರಡು ಪ್ರತ್ಯೇಕ ಎಂದು ಕೆಲವರು ಬಿಂಬಿಸುತ್ತ ಹೊರಟಿದ್ದು, ಇದು ಲಿಂಗಾಯತರನ್ನು ಒಡೆಯುವ ಹುನ್ನಾರ. ಕೆಲವರು ಹಿಂದು ವೀರಶೈವ ಲಿಂಗಾಯಿತ ಎಂದು ಬರೆಸಬೇಕು ಮತ್ತೆ ಕೆಲವರು ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ವೀರಶೈವ-ಲಿಂಗಾಯತ ಎರಡೂ ಒಂದೆ. ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂದು ಹೋರಾಟ ಮಾಡುತ್ತ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದರೆ ಅದಕ್ಕೆ ಕಾಲ ಇನ್ನೂ ಪಕ್ವವಾಗಿಲ್ಲ. ಈ ದ್ವಂದ್ವ ಪರಿಸ್ಥಿತಿಯಲ್ಲಿ ನಾವು ಹಿಂದು ವೀರಶೈವ ಲಿಂಗಾಯತ ಬೇರೆ, ವೀರಶೈವ ಲಿಂಗಾಯತ ಬೇರೆ ಎಂದು ನಮೂದಿಸುತ್ತ ಹೋದರೆ, ಈಗಾಗಲೇ ಕರ್ನಾಟಕ ಸರ್ಕಾರ 65 ಲಕ್ಷ ಲಿಂಗಾಯತರು ಇದ್ದಾರೆ ಎಂದು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅದು 35 ಲಕ್ಷಕ್ಕೆ ಇಳಿಯುತ್ತದೆ. ಆದುದರಿಂದ ಈ ಸಂದರ್ಭದಲ್ಲಿ ಯಾರು ಯಾವ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳದೆ, ಹಿಂದು ವೀರಶೈವ ಲಿಂಗಾಯತ ಎಂದು ಬರೆಸಿದರೆ ಒಗ್ಗಟಿನ ಪ್ರದರ್ಶನವಾಗುತ್ತದೆ ಮತ್ತು ಬಹು ಸಂಖ್ಯಾತರ ಪಟ್ಟಿಯಲ್ಲಿ ಬರುತ್ತದೆ. ಎಲ್ಲರೂ ಹಿಂದು ವೀರಶೈವ ಲಿಂಗಾಯತ ಎಂದೇ ಬರೆಸಬೇಕು ಹಾಗೂ ಪಂಚಮಸಾಲಿ, ಸಾದರ, ಲಿಂಗಾಯತ, ಕುಂಬಾರ, ರೆಡ್ಡಿ, ಹಡಪದ, ಬಣಜಿಗ, ನೊಳಂಬ, ನೇಕಾರ, ಶಿವಚಿಂಪಿಗ ಎಂಬ ಇತ್ಯಾದಿ ಅವರವರ ಒಳಪಂಗಡ ಉಪಜಾತಿಯನ್ನು ಸೇರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net