

ಕೂಡ್ಲಿಗಿ: ಶ್ರೀ ಹಾನಗಲ್ಲ ಗುರುಕುಮಾರೇಶ್ವರರು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಸಮಾಜ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಮಾಜದ ಮುನ್ನೆಲೆಗೆ ಬರಬೇಕಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ರೆಡ್ಡಿ ಹೇಳಿದರು. ಪಟ್ಟಣದ ಮದಕರಿ ವೃತ್ತದ ಖಾಸಗಿ ಮಳಿಗೆಯೊಂದರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕಚೇರಿ ಉದ್ಘಾಟಿಸಿ ಮಾತನಾಡಿದರು.
ವೀರಶೈವ ಉಪಪಂಗಡಗಳ ಒಗ್ಗಟ್ಟಿನ ಕೊರತೆಯಿಂದ ಬಹು ದೊಡ್ಡ ಸಮಾಜ ಇಂದು ಕ್ಷೀಣಿಸುವಂತಾಗಿರುವುದು ವಿಷಾದನೀಯ ಸಂಗತಿಯಾಗಿದೆ. ಚುನಾವಣೆ ಸಮಯದಲ್ಲಿ ರಾಜಕೀಯವಾಗಿ ಬಳಸಿಕೊಂಡ ಪಕ್ಷಗಳು, ನಂತರದಲ್ಲಿ ಯಾವುದೇ ಅನುಕೂಲತೆ ಕಲ್ಪಿಸದೆ ತಾತ್ಸರ ಮನೋಭಾವದಿಂದ ಸಮುದಾಯವನ್ನು ಕಡೆಗಣಿಸುವುದು ನಡೆದಿದೆ.
ವೀರಶೈವ ಮಹಾಸಭಾದ ಸದಸ್ಯರಾಗುವುದರೊಂದಿಗೆ, ತಾಲೂಕಿನಲ್ಲಿ 10 ಸಾವಿರ ಸದಸ್ಯರನ್ನು ನೋಂದಾಯಿಸಿಕೊಳ್ಳುವ ಮೂಲಕ ವೀರಶೈವರ ಒಗ್ಗಟ್ಟನ್ನು ತೋರಿಸಬೇಕು ಎಂದರು.
ಶಾಸಕ ಡಾ.ಎನ್.ಟಿ. ಶ್ರೀನಿವಾಸ ಮಾತನಾಡಿ, ವೀರಶೈವರ ಬಹುದಿನಗಳ ಬೇಡಿಕೆಯಾದ ವೀರಶೈವ ರುದ್ರಭೂಮಿಯನ್ನು ಕಲ್ಪಿಸುವ ಉದ್ದೇಶದಿಂದ ಹಿರಿಯರೊಂದಿಗೆ ಚರ್ಚಿಸಿ ಅತ್ಯಂತ ಶೀಘ್ರದಲ್ಲಿ ಸ್ಥಳಾವಕಾಶವನ್ನು ನೀಡುವುದರೊಂದಿಗೆ, ಸುಸಜ್ಜಿತವಾಗಿ ನಿರ್ಮಿಸಿಕೊಡಲಾಗುವುದು ಎಂದರು. ಸಮುದಾಯದ ಕಚೇರಿಗಾಗಿ ಈಗಾಗಲೇ ಪಪಂ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.
ಮಹಾಸಭಾದ ಜಿಲ್ಲಾಧ್ಯಕ್ಷ ಸಂಗಪ್ಪ, ಕಾರ್ಯದರ್ಶಿ ಚಂದ್ರಶೇಖರ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ತಾಲೂಕು ಅಧ್ಯಕ್ಷ ಸುನೀಲ್ ಗೌಡ್ರು, ಗೌರವ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ತಾಲೂಕು ಕಾರ್ಯದರ್ಶಿ ಜಿ.ಎಸ್.ಗಿರೀಶ, ಗುಳಿಗಿ ವೀರೇಂದ್ರ ಕುಮಾರ್, ನಾಗಮಣಿ ಜಿಂಕಲ್, ಮಹಿಳಾ ಘಟಕದ ಕೆ.ಎಚ್.ಎಂ.ಶೈಲಜಾ, ಮೂಗಪ್ಪ ಬಣಕಾರ ಇತರರಿದ್ದರು.