ಹುಕ್ಕೇರಿ ಶಕ್ತಿ ರಾಜ್ಯಕ್ಕೇ ತೋರಿಸೋಣ

5Huk2
Published on

ಉಳ್ಳಾಗಡ್ಡಿ-ಖಾನಾಪುರ: ಸಂಘದ ನಿರ್ದೇಶಕರು ದ್ರೋಹ ಬಗೆದಿದ್ದರಿಂದ ಈಗ ಚುನಾವಣೆಯತ್ತ ಮುಖ ಮಾಡಿದ್ದೇವೆ. ಆ.28ರಂದು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಡೆಯಲಿದೆ. ರಾಜ್ಯಕ್ಕೆ ಹುಕ್ಕೇರಿ ತಾಲೂಕಿನ ಸಹಕಾರಿ ಶಕ್ತಿ ಪ್ರದರ್ಶಿಸಬೇಕಾಗಿದೆ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ಸಮೀಪದ ಹೆಬ್ಬಾಳ ಗ್ರಾಮದ ಬಿರದೇವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಹಕಾರಿ ತತ್ತ್ವದಡಿ ನಡೆಯುತ್ತಿರುವ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಹಾಗೂ ವಿದ್ಯುತ್ ಸಹಕಾರಿ ಸಂಘ ದಿ. ಅಪ್ಪಣ್ಣಗೌಡರು ಮತ್ತು ದಿ. ವಿಶ್ವನಾಥ ಕತ್ತಿ ಉತ್ತಮವಾಗಿ ನಡೆಸಿಕೊಂಡು ಬಂದಿದ್ದರು. ಬಳಿಕ ತಂದೆ ಉಮೇಶ ಕತ್ತಿ, ಚಿಕ್ಕಪ್ಪ ರಮೇಶ ಕತ್ತಿ ಮಾರ್ಗದರ್ಶನದಲ್ಲಿ ಸಂಘ ಉತ್ತಮವಾಗಿ ನಡೆಯುತ್ತಿತ್ತು. ಆದರೆ, ದ್ರೋಹ ಎಸಗಿದ್ದರಿಂದ ಇದೀಗ ಚುನಾವಣೆ ಎದುರಾಗಿದೆ ಎಂದರು.

ಕಾರ್ಯಕರ್ತರನ್ನು ಮರಿಬ್ಯಾಡ್ರಿ: ಯಮಕನಮರಡಿ ಮತಕ್ಷೇತ್ರದ ಜಿನರಾಳ ಗ್ರಾಮದ ಬಿಜೆಪಿ ಕಾರ್ಯಕರ್ತ ಮಲ್ಲಯ್ಯ ಮಠಪತಿ ಮಾತನಾಡಿ, ಕಾರ್ಯಕರ್ತರಿಗೆ ಕಷ್ಟ ಬಂದಾಗ ಕೈ ಹಿಡಿಯಿರಿ. ಸಂಕೇಶ್ವರದ ಸಕ್ಕರೆ ಕಾರ್ಖಾನೆಯವರು ನಮ್ಮ ಕಬ್ಬು ಕಡಿದು ಒಣಗಿಸಿದ್ರೂ, ಈ ವಿಷಯ ಎಲ್ಲ ಬಿಜೆಪಿ ಮುಖಂಡರಿಗೂ ಹೇಳಿದ್ದೇನೆ.

ಕೆಇಬಿ ಚುನಾವಣೆ ಬಂದಾಗ ಮಾತ್ರ ಬರಬ್ಯಾಡ್ರಿ ಕಷ್ಟ ಕಾಲದಾಗ ಕಾರ್ಯಕರ್ತರನ್ನು ನೋಡ್ರಿ, ಇಲ್ಲವಾದ್ರೆ ನಮ್ಮನ್ನು ಬಿಡ್ರಿ ಎಂದು ಕೈಮುಗಿದರು. ಆಗ ನಿಖಿಲ್‌ಮಾತನಾಡಿ, ತಂದೆಯವರ ಅಕಾಲಿಕ ನಿಧನದಿಂದ ಎರಡು ವರ್ಷಗಳಲ್ಲಿ ಹೆಚ್ಚು ಕಾರ್ಯಕರ್ತರನ್ನು ಭೇಟಿ ಮಾಡಲು ಆಗಿಲ್ಲ. ಮುಂದೆ ಇಂತಹ ಪ್ರಮಾದ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ವೇದಿಕೆಯಲ್ಲಿದ್ದ ಮಾಜಿ ಅಧ್ಯಕ್ಷ ಕಲಗೌಡ ಪಾಟೀಲ, ಬಸವರಾಜ ಹುಂದ್ರಿ, ಮುರುಗೇಶ ಹಿರೇಮಠ, ಮಾತನಾಡಿದರು. ಮಹಾರುದ್ರ ಜರಳಿ, ಪ್ರಕಾಶ ನಿಲಜಿ, ರಮೇಶ ಚಿಂಚಿ, ಶಶಿಕಾಂತ ಮಠಪತಿ, ಅಪ್ಪಾಸಾಹೇಬ ಸಂಕಣ್ಣವರ, ಅಂದಾನಯ್ಯ ಹಿರೇಮಠ, ಶ್ರೀಶೈಲ ಯಮಕನಮರಡಿ, ಅಜಿತ್ ಮುನ್ನೊಳ್ಳಿ, ಶಿವಾನಂದ ಬಾಗೇವಾಡಿ, ರಾಜು ಮಠಪತಿ, ವಿನಯ ಪಾಟೀಲ, ರಾಜು ಕಂಕಣವಾಡಿ, ಚೇತನಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net