

ಮುಳಬಾಗಿಲು: ಯುವಪೀಳಿಗೆಯ ಭವಿಷ್ಯಕ್ಕಾಗಿ ಕೆರೆಗಳ ಉಳಿವು ಅವಶ್ಯವಾಗಿದ್ದು, ಜಾನುವಾರುಗಳ ರಕ್ಷಣೆಗಾಗಿ ಸರ್ಕಾರಿ ಗೋಮಾಳ, ಜಮೀನನ್ನು ಉಳಿಸಿಕೊಳ್ಳಲು ರೈತರು ದೇಶ ಕಾಯುವ ಯೋಧರಂತೆ ಶ್ರಮಿಸಬೇಕು ಎಂದು ರೈತ ಸಂಘದ ಉಪಾಧ್ಯಕ್ಷ ಕೆ.
ನಾರಾಯಣಗೌಡ ತಿಳಿಸಿದರು.
ರೈತ ದಿನಾಚರಣೆ ಪ್ರಯುಕ್ತ ತಾಲೂಕಿನ ಆವಣಿ ಹೋಬಳಿ ದೇವರಾಯಸಮುದ್ರ ವ್ಯಾಪ್ತಿಯ ತಮ್ಮೇಗೌಡನ ಕೆರೆಗೆ ಬುಧವಾರ ಪೂಜೆ ಸಲ್ಲಿಸಿ, ಕೆರೆ ರಸುವ ಪ್ರತಿಜ್ಞೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹತ್ತಾರು ಹಳ್ಳಿಗಳ ಪೂರ್ವಜರು ವರ್ಷಾನುಗಟ್ಟಲೇ ಬೆವರು ಸುರಿಸಿ ಕಟ್ಟಿ, ಸಂರಸಿದ ಕೆರೆಗಳ ಮೇಲೆ ಬೆಂಗಳೂರು ರಿಯಲ್ ಎಸ್ಟೇಟ್ ಭೂಗಳ್ಳರ ವಕ್ರದೃಷ್ಟಿ ಬಿದ್ದು, ದಿನೇದಿನೆ ಒತ್ತುವರಿಯಾಗಿ ನಶಿಸುತ್ತಿದ್ದರೂ, ಕೆರೆಗಳ ಸಂರಕ್ಷಣೆ ಬಗ್ಗೆ ರೈತರು ಧ್ವನಿ ಎತ್ತದೇ ಇರುವುದು ದುರದೃಷ್ಟಕರ ಎಂದರು.
ಪ್ರತಿ ವಾರಕ್ಕೊಂದು ಕೆರೆ ಒತ್ತುವರಿ ತೆರವುಗೊಳಿಸಬೇಕೆಂಬ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಆದೇಶ ಎಲ್ಲಿ ಹೋಯಿತು?, ಭೂಗಳ್ಳರ ಸೂಟ್ಕೇಸ್ನಲ್ಲಿ ಕಳೆದು ಹೋಯಿತೇ? ಇಲ್ಲ, ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆಯೇ ಎಂದು ಪ್ರಶ್ನಿಸಿದರು.
ಲಕ್ಷಲಕ್ಷ ಸಂಬಳ ಪಡೆದು ಜನಸೇವೆ ಮಾಡುವ ಜತೆಗೆ ಸರ್ಕಾರಿ ಆಸ್ತಿ ಉಳಿಸಬೇಕಾದ ಕಂದಾಯ, ಸರ್ವೇ ಅಧಿಕಾರಿಗಳೇ ಭೂಗಳ್ಳರ ಜತೆ ಶಾಮೀಲಾಗಿ ಲಕ್ಷಲಕ್ಷ ಲಂಚ ಪಡೆದು ಜಲ ಮೂಲಗಳಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ರಾತ್ರೋರಾತ್ರಿ ಕೆರೆಗಳು ಸ್ವರೂಪವನ್ನೇ ಕಳೆದುಕೊಂಡಿವೆ ಎಂದು ಭೂಗಳ್ಳರಿಗೆ ಸ್ಥಳಿಯ ರೈತರ ಹೆಸರಿನಲ್ಲಿ ಜಾಗ ಮಂಜೂರು ಮಾಡಿದ ದೊಡ್ಡ ಜಾಲವೇ ಕಂದಾಯ ಸರ್ವೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ನಾರಾಯಣಗೌಡ ಆರೋಪಿಸಿದರು.
ಆವನಿ ಹೋಬಳಿ ಕಂದಾಯ ಅಧಿಕಾರಿ ಸಿ.ಸುಬ್ರಹ್ಮಣಿ ಮಾತನಾಡಿ, ಸರ್ಕಾರಿ ಆಸ್ತಿ ಉಳಿಸಲು ಇಲಾಖೆ ಕ್ರಮವಹಿಸಲಿದ್ದು, ಯಾವುದೇ ಒತ್ತಡಕ್ಕೆ ಮಣಿಯದೆ ಕೆರೆ, ಗೋಮಾಳ ಸರ್ವೇ ಮಾಡಿಸಿ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ಭರವಸೆ ನೀಡಿದರು.
ಮುಖಂಡರಾದ ಬಂಗಾರಿ ಮಂಜು, ಶ್ರೀನಿವಾಸ್, ಜುಬೇರ್ ಪಾಷಾ, ಧರ್ಮ, ಸುಪ್ರೀಂಚಲ, ಮುನಿರಾಜು, ಶಶಿ, ಗಂಗಾಧರ್, ಅಂಬ್ಲಿಕಲ್ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಗೀತಾ, ಶೈಲಜಾ, ರತ್ನಮ್ಮ, ಚೌಡಮ್ಮ ಇದ್ದರು.
ಅಭಿವೃದ್ಧಿ ನೆಪದಲ್ಲಿ ಭೂಸ್ವಾಧಿನ ಸಲ್ಲ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಣಿ ಆನಂದರೆಡ್ಡಿ ಮಾತನಾಡಿ, ಕೈಗಾರಿಕೆ, ರಸ್ತೆ, ನಿವೇಶನ ಮತ್ತಿತರರ ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿಯನ್ನು ರೈತರಿಂದ ಬಲವಂತವಾಗಿ ಭೂಸ್ವಾಧಿನ ಮಾಡಿಕೊಳ್ಳುವುದನ್ನು ಕೈಬಿಡಬೇಕು. ಈಗಾಗಲೇ ಭೂಸ್ವಾಧಿನ ಮಾಡಿಕೊಂಡಿರುವ ಭೂಮಿಯನ್ನು ಕೈಗಾರಿಕೆಗಳಿಗೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಉಪಯೋಗಿಸಬೇಕು. ಪದೇಪದೆ ರೈತರ ಕೃಷಿಭೂಮಿ ತಂಟೆಗೆ ಬಂದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಶೇಷ ತಂಡ ರಚಿಸಿ
ರಾಷ್ಟ್ರೀಯ ಹೆದ್ದಾರಿ 75ರ ಅಕ್ಕಪಕ್ಕದಲ್ಲಿರುವ ನೂರಾರು ಎಕರೆ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗಿದ್ದು, ದೇವರಾಯಸಮುದ್ರ ಕಂದಾಯ ವ್ಯಾಪ್ತಿಯ ಸರ್ಕಾರಿ ಜಮೀನು ಸರ್ವೇ ಮಾಡಲು ಶಾಸಕ ಸಮೃದ್ಧಿ ಮಂಜುನಾಥ್ ಅವರು ವಿಶೇಷ ತಂಡ ರಚಿಸಬೇಕು. ಆ ಮೂಲಕ ಒತ್ತುವರಿ ತೆರವುಗೊಳಿಸಿ, ಅಕ್ರಮ ದಾಖಲೆಗಳನ್ನು ಸೃಷ್ಟಿಸಿರುವ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಭೂಮಿ ಇಲ್ಲದ ರೈತರಿಗೆ ಇಲ್ಲವೇ ಜಾನುವಾರುಗಳಿಗೆ ಮೀಸಲಿಡಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಣಿ ಆನಂದರೆಡ್ಡಿ ಒತ್ತಾಯಿಸಿದರು.