ನಶಿಸುತ್ತಿರುವ ಜಾನಪದ ಉಳಿಸಿ ಬೆಳೆಸೋಣ

h30-Janapad 2
Published on

ಹುಬ್ಬಳ್ಳಿ: ಜಾನಪದ ಸಂಸ್ಕೃತಿ, ಸಾಹಿತ್ಯ, ಕಲೆ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿವೆ. ನಮ್ಮ ಬದುಕಿನೊಂದಿಗೆ ಬೆರೆತಿರುವ ಜಾನಪದವನ್ನು ಉಳಿಸಿ ಬೆಳೆಸೋಣ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ ಸಲಹೆ ಹೇಳಿದರು.

ಶ್ರೀ ಕಾಮಾಕ್ಷಿ ಮಹಿಳಾ ಮಂಡಳ, ಧಾರವಾಡ ಜಿಲ್ಲಾ ಕಸಾಪ ಘಟಕ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಚಂದ್ರಶೇಖರ ಕಂಬಾರ ದತ್ತಿ ‘ಜಾನಪದ ಶ್ರಾವಣ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವೆಲ್ಲ ಶಾಲಾ ದಿನಗಳಲ್ಲಿ ಜಾನಪದ ಸಂಭ್ರಮದಲ್ಲಿ ಮಿಂದೇಳುತ್ತಿದ್ದೆವು. ಈಗ ನಮ್ಮ ಮಕ್ಕಳಿಗೂ ಇಂಥ ಕಲೆಯ ಪರಿಚಯವಿಲ್ಲ. ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮುಂದುವರಿಸಬೇಕಿದೆ ಎಂದರು.

ಕಸಾಪ ಧಾರವಾಡ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕಾಮಾಕ್ಷಿ ಮಹಿಳಾ ಮಂಡಳ 25ನೇ ವರ್ಷಾಚರಣೆ ಮಾಡಿಕೊಂಡಿದೆ. ಶ್ರಾವಣ ಸಂಭ್ರಮ ಆಚರಿಸಲು ಕಸಾಪ ಸಹಕಾರ ನೀಡಿದೆ. ಮುಂಬರುವ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಮಹಾನಗರ ಪಾಲಿಕೆ ಸಹಕರಿಸಿ, ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.

ಮಹಾವೀರ ಶಿಕ್ಷಣ ಸಮಿತಿ ಅಧ್ಯಕ್ಷ ಪ್ರೊ.ಎಸ್.ಕೆ.ಆದಪ್ಪನವರ ಮಾತನಾಡಿ, ನಮ್ಮ ದೇಶದ ಅತ್ಯಮೂಲ್ಯ ಸಂಸ್ಕೃತಿ ಜಾನಪದ. ಇದರ ಕಂಪು ವಿಶ್ವದಾದ್ಯಂತ ಹರಡಿದೆ. ನಮ್ಮ ಜಾನಪದ ಸಾಹಿತ್ಯದ ಸೊಗಡು ಎಲ್ಲರಿಗೂ ಪರಿಚಯಿಸಬೇಕು. ಅದರಲ್ಲೂ ಮಕ್ಕಳಿಗೆ ಮಾಹಿತಿ ಹಂಚುವ ಕಾರ್ಯ ನಡೆಯಬೇಕು ಎಂದರು.

ಕಾಮಾಕ್ಷಿ ಮಹಿಳಾ ಮಂಡಳದ ಅಧ್ಯಕ್ಷೆ ಸಿದ್ದಮ್ಮ ಅಡಿವೆಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮುರಿ, ನಾದಸುರಭಿ ಸಾಂಸ್ಕೃತಿಕ ಕಲಾ ಅಕಾಡೆಮಿಯ ಮುಖ್ಯಸ್ಥೆ ಡಾ. ಜ್ಯೋತಿಲಕ್ಷ್ಮೀ ಡಿ.ಪಿ, ಸಂಗೀತ ಶಿಕ್ಷಕಿ ಡಾ. ಗಾಯತ್ರಿ ಜೋಶಿ, ಪ್ರೊ. ಕೆ.ಎಸ್. ಕೌಜಲಗಿ, ಕಸಾಪ ಹುಬ್ಬಳ್ಳಿ ಶಹರ ಅಧ್ಯಕ್ಷ ವಿರೂಪಾಕ್ಷ ಕಟ್ಟಿಮನಿ, ಸುಚಿತಾ ನಾಯ್ಕ, ಅನಸೂಯಾ ಪಾಟೀಲ, ಸುರೇಖಾ ನಿರಂಜನ, ರಾಧಾ ದೇಸಾಯಿ, ವಿಜು ಕರಿಂಡಿ, ಇತರರು ಇದ್ದರು.

ಗಮನ ಸೆಳೆದ ಜಾನಪದ ಗೀತೆ: ಜಾನಪದ ಗೀತೆ, ಜಾನಪದ ನೃತ್ಯ ಸ್ಪರ್ಧೆ ಜನಮನ ಸೆಳೆದವು. ಸುಮಾರು 10ಕ್ಕೂ ಹೆಚ್ಚು ಮಹಿಳಾ ಮಂಡಳದವರು ಜಾನಪದ ಶ್ರಾವಣ ಸಂಭ್ರಮಕ್ಕೆ ಮೆರಗು ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net