

ಹುಬ್ಬಳ್ಳಿ: ಭಾರತೀಯ ಗೋತಳಿ ಅಳಿವಿನಂಚಿಗೆ ಬರುತ್ತಿದೆ. ರೈತರು ಮುಂದೆ ಬಂದು ಇಂಥ ತಳಿಗಳನ್ನು ಉಳಿಸಿ ಬೆಳೆಸುವ ಹೊಣೆ ಹೊರಬೇಕು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಲಹೆ ನೀಡಿದರು.
ಗೋಸೇವಾ ಗತಿವಿಧಿ ಮತ್ತು ಆರೋಗ್ಯ ಭಾರತಿ ಕರ್ನಾಟಕ ಉತ್ತರ ಪ್ರಾಂತ, ಪಂಚಗವ್ಯ ಆಯುರ್ವೆದ ವೈಜ್ಞಾನಿಕ ಸಮಾವೇಶ ಸ್ವಾಗತ ಸಮಿತಿ, ಧನ್ಯೋಸ್ಮಿ ಯೋಗ ಕೇಂದ್ರ ಮತ್ತು ಎಲ್ಲ ಗೋ ಪ್ರೇಮಿ ಸಂಘಟನೆಗಳ ವತಿಯಿಂದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪಂಚಗವ್ಯ ಆಯುರ್ವೆದ ವೈಜ್ಞಾನಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಆಳುವ ಸರ್ಕಾರಗಳು ರೈತರ, ಜನರ ದಾರಿ ತಪ್ಪಿಸುತ್ತಿವೆ. ಹಣದ ಆಮಿಷವೊಡ್ಡಿ ವಿದೇಶ ತಳಿಗಳನ್ನು ಬೆಳೆಸುತ್ತಿವೆ. ಹಣಕ್ಕಾಗಿ ರೈತರು ಈ ತಿಳಿ ಬೆಳೆಸಲು ದುಂಬಾಲು ಬಿದ್ದಿದ್ದಾರೆ. ಔಷಧೀಯ ಗುಣವುಳ್ಳ ನಮ್ಮ ದೇಶೀಯ ತಳಿಗಳನ್ನು ಉಳಿಸಲು ಮುಂದಾಗಬೇಕು ಎಂದರು.
ಸ್ವರ್ಣ ಗ್ರುಪ್ ಆಫ್ ಕಂಪನೀಸ್ನ ವ್ಯವಸ್ಥಾಪಕ ನಿರ್ದೇಶಕ, ಸ್ವಾಗತಿ ಸಮಿತಿ ಅಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ಹಿಂದು ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಬೆಳೆಸಬೇಕು. ಇದು ನಮ್ಮ ಶ್ರೇಷ್ಠ ಸಂಸ್ಕೃತಿ. ಈಗಾಗಲೇ ಆರ್ಎಸ್ಎಸ್ನಂತ ಸಂಘಟನೆಗಳು ನಮ್ಮ ಸಂಸ್ಕೃತಿಯನ್ನು ಪೋಷಣೆ ಮಾಡುತ್ತಿವೆ. ಹಾಗಾಗಿಯೇ ನಮ್ಮ ಭಾರತ ವಿಶ್ವಗುರುವಾಗಲು ಮುಂದಡಿ ಇಡುತ್ತಿದೆ ಎಂದರು.
ಗುಜರಾತ್ ಸರ್ಕಾರದ ಪಂಚಗವ್ಯ ಕ್ಲಿನಿಕಲ್ ರಜಿಸ್ಟ್ರಿ ಚೇರ್ಮನ್ ಡಾ. ಹಿತೇಶ ಜಾನಿ ಮಾತನಾಡಿದರು.
ಗೋಸೇವಾ ಗತಿವಿಧಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ರಾಘವನ್ ಜಿ., ಡಾ. ಆನಂದ ಕಟ್ಟಿ, ಡಾ. ವಿಜಯಕುಮಾರ ಬಿರಾದಾರ, ಆರ್ಎಸ್ಎಸ್ ಧಾರವಾಡದ ವಿಭಾಗದ ಸಂಘಚಾಲಕರಾದ ಗೋವಿಂದಪ್ಪ ಗೌಡಪ್ಪಗೋಳ, ಶ್ರೀಧರ ನಾಡಗೀರ, ಸಿ.ವಿ. ರೆಡ್ಡಿ, ಆರೋಗ್ಯ ಭಾರತಿ ಪ್ರಾಂತ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ, ಕೋಶಾಧ್ಯಕ್ಷ ಭರತ ಭೇರುಲಾಲ್ ಜೈನ್, ವಿಕ್ರಮ ಶಿರೂರ, ವಿನಾಯಕ ತಲಗೇರಿ, ದತ್ತಾತ್ರೇಯ ಭಟ್ಟ ಇತರರು ಇದ್ದರು.