ಕಾರ್ಮಿಕಪರ ಕಾನೂನು ಮರುಸ್ಥಾಪಿಸಲಿ

09 Jaggu 6
Published on

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದೇಶದ ಎಲ್ಲ ಕಾರ್ಮಿಕ ಸಂಟನೆಗಳು ಜಂಟಿಯಾಗಿ ನಡೆಸುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಅಖಿಲ ಭಾರತ ಅಂಗನವಾಡಿ ನೌಕರರ ಫೆಡರೇಷನ್​ ನೇತೃತ್ವದಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

ಕಾರ್ಮಿಕರಿಗೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆದು, ಮೊದಲಿನ ಕಾರ್ಮಿಕರಪರ ಎಲ್ಲ ಕಾನೂನು ಮರುಸ್ಥಾಪಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಏರಿಸಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಮೀಸಲಿರಿಸಿ ಬಿಡುಗಡೆ ಮಾಡಬೇಕು. ನಮ್ಮ ಸೇವೆಯನ್ನು ನಾಗರಿಕ ಸೇವೆಯಾಗಿ ಪರಿಗಣಿಸಿ, ಸಿ ಮತ್ತು ಡಿ ಗ್ರೂಪ್​ಗೆ ಸೇರಿಸಬೇಕು. ಎಲ್ಲರಿಗೂ ಇಡಗಂಟು ನೀಡಬೇಕು ಎಂದು ಒತ್ತಾಯಿಸಿದರು.

ಕಳಪೆ ಆಹಾರ ಪಡೆಯಲು ಜನರು ಹಿಂಜರಿಯುತ್ತಿದ್ದಾರೆ. ಫೇಸ್​ ಕ್ಯಾಪ್ಚರ್​ ಮಾಡಲು ಹೋದಾಗ ತೊಂದರೆಯಾಗುತ್ತಿದೆ. ಮಾತೃವಂದನಾ ಯೋಜನೆ ಹಣವನ್ನು ಸೈಬರ್​ ಕಳ್ಳರು ಕದಿಯುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನಾಗೇಶ ಸಾತೇರಿ, ವೈ.ಬಿ.ಶೀಗಿಹಳ್ಳಿ, ಮೀನಾ ಕೋಟಗಿ, ಗೀತಾ ಭೋಸಲೆ, ಸವಿತಾ ಡಿಗ್ರಿ, ಮಂಗಲ ಪಾಟೀಲ, ಚಿನ್ನಕ್ಕ ಹೂಲಿಕವಿ, ಮಲಪ್ರಭಾ ಹ್ಯಾಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net