

ಹುಬ್ಬಳ್ಳಿ: ಆಕ್ಸ್ಫರ್ಡ್ ಕಾಲೇಜ್ ಅಧ್ಯಕ್ಷ ವಸಂತ ಹೊರಟ್ಟಿ ಅವರ ಜನ್ಮ ದಿನ ನಿಮಿತ್ತ ನಗರದ ಕಾಲೇಜ್ ಆವರಣದಲ್ಲಿ ವಿವಿಧ ವೈದ್ಯಕೀಯ ಸಂಸ್ಥೆಗಳೊಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಮಂಗಳವಾರ ಏರ್ಪಡಿಸಲಾಗಿತ್ತು.
ನೇತ್ರತಜ್ಞ ಡಾ. ಶ್ರೀಕೃಷ್ಣ ನಾಡಗೌಡ ಮಾತನಾಡಿ, ದೇಶದಲ್ಲಿ 3 ಕೋಟಿ ಜನರಲ್ಲಿ ಪೂರ್ಣಪ್ರಮಾಣದ ಅಂಧತ್ವವಿದೆ. ಬಹಳಷ್ಟು ಜನರ ನೇತ್ರದಾನದಿಂದ ಇವರಿಗೆ ಜಗತ್ತು ನೋಡಲು ಸಾಧ್ಯವಾಗಲಿದೆ. ಅಪೌಷ್ಟಿಕತೆ ಹಾಗೂ ವೈದ್ಯಕೀಯ ಕೊರತೆ ಕಾರಣದಿಂದ ಬಹಳಷ್ಟು ಜನರಲ್ಲಿ ಕುರುಡುತನ ಕಂಡುಬರುತ್ತಿದೆ. ನೇತ್ರದಾನದ ಜಾಗೃತಿ ಮಾಡುವ ಮೂಲಕ ಅಂಧತ್ವ ನಿವಾರಿಸಲು ಸಂಕಲ್ಪ ಮಾಡೋಣ ಎಂದರು.
ಎಸ್ಡಿಎಂ ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ. ನಾಗರಾಜ ನಾಯಕ್ ಮಾತನಾಡಿ, ನಟ ಪುನೀತ್ರಾಜಕುಮಾರ, ಸಂಚಾರಿ ವಿಜಯ ಅವರೆಲ್ಲ ಯುವಕರಿಗೆ ಮಾದರಿ. ಇವರಂತೆ ಕಣ್ಣು, ಅಂಗಾಂಗ ದಾನ ಮಾಡಲು ಮುಂದೆ ಬರಬೇಕು. ಅಂಗಾಂಗ ದಾನದ ಮಹತ್ವವನ್ನು ಎಲ್ಲೆಡೆ ಸಾರಬೇಕು ಎಂದರು.
ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿದರು.
ರಾಷ್ಟ್ರೋತ್ಥಾನ ರಕ್ತಭಂಡಾರದ ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ ಅವರು ರಕ್ತದಾನದ ಮಹತ್ವ ತಿಳಿಸಿಕೊಟ್ಟರು.
ಜನ್ಮ ದಿನ ನಿಮಿತ್ತ ಆಕ್ಸ್ಫರ್ಡ್ ಕಾಲೇಜ್ ಅಧ್ಯಕ್ಷ ವಸಂತ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ದೇಹದಾನ ಮಾಡಿದ ಗಿರಿಜಾ ಲೂತಿಮಠ, ಸಂಜಯ ಅಳಗುಂಡಗಿ ಅವರನ್ನು ಗೌರವಿಸಲಾಯಿತು.
ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯಿಂದ ನೇತ್ರ ಹಾಗೂ ಪವಾರ್ ಸ್ಕಿನ್ ಆಂಡ್ ಆಂಕೋ ಕೇರ್ ಕ್ಲಿನಿಕ್ನಿಂದ ಚರ್ಮರೋಗ ತಪಾಸಣೆ ಜರುಗಿತು. ರಾಷ್ಟ್ರೋತ್ಥಾನ ರಕ್ತ ಭಂಡಾರದಿಂದ ರಕ್ತದಾನ ಮತ್ತು ಎಸ್ಡಿಎಂ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಗಾಂಗ ದಾನ ಜಾಗೃತಿ ಶಿಬಿರ ನಡೆಯಿತು. ಬಹಳಷ್ಟು ಜನರು ರಕ್ತದಾನ ಮಾಡಿದರು. ಕೆಲವರು ನೇತ್ರದಾನ ಮತ್ತು ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದರು.
ಡಾ. ಮಧುಲಿಕಾ ವಸಂತ ಹೊರಟ್ಟಿ, ಪ್ರಾಚಾರ್ಯ ಪ್ರೊ.ಎಂ. ಮಂಜುನಾಥ, ಇತರರು ಇದ್ದರು.