

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಇದು ನಮಗೆಲ್ಲ ಹೆಮ್ಮೆಯ ಸಂಗತಿ. ಇದೇ ವೇಳೆ ನಾವೆಲ್ಲ ಸದೃಢ, ಸಮೃದ್ಧ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶ್ರೀರಾಮನವಮಿ ಉತ್ಸವ ಸಮಿತಿಯಿಂದ ನಗರದ ಬಾನಿ ಓಣಿಯ ಶಕ್ತಿ ರಸ್ತೆಯಲ್ಲಿ ಸೋಮವಾರ ಏರ್ಪಡಿಸಿದ್ದ ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
200 ವರ್ಷಗಳ ಕಾಲ ನಮ್ಮನ್ನು ಆಳಿದ್ದ ಇಂಗ್ಲೆಂಡ್ ದೇಶವನ್ನು ಹಿಂದಿಕ್ಕೆ ನಾವು ಜಗತ್ತಿನ ಐದನೇ ಆರ್ಥಿಕ ಶಕ್ತಿ ಹೊಂದಿದ್ದೇವೆ ಎಂದರು.
ಮೂರು ಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಜನರು ತಮ್ಮ ಮನೆಯ ಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದಾರೆ. ಶತಮಾನಗಳ ಕಾಯುವಿಕೆಗೆ ಮುಕ್ತಿ ಸಿಕ್ಕಿದೆ. ಶ್ರೀರಾಮ ದೇಶದಲ್ಲಿ ಅವತರಿಸಿದ್ದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ರಾಮನಾಮ ಜಪದಿಂದ ಅಧ್ಯಾತ್ಮ ಶಕ್ತಿ ಹೆಚ್ಚಲಿದೆ. ಪ್ರತಿನಿತ್ಯ ರಾಮನಾಮ ಸ್ಮರಣೆ ಮಾಡಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು.
ಕರಸೇವಕರಾದ ಹುಬ್ಬಳ್ಳಿಯ ಗುರುಸಿದ್ದಪ್ಪ ಶೆಲ್ಲಿಕೇರಿ, ಮಂಜುನಾಥ ಬದ್ದಿ, ಕಿಶೋರ ಕಾಟವೆ, ಜೀವಣ್ಣ ಕಾಮಕರ, ಉಮಾಕಾಂತ ಪವಾರ, ವಕೀಲರಾದ ಸಂಜಯ ಬಡಸ್ಕರ, ಅಶೋಕ ಅಣವೇಕರ, ರಾಮಚಂದ್ರ ಮಟ್ಟಿ, ಗೌರಿಶಂಕರ ಮೊಟ, ಸತೀಶ ಪಾಟನಕರ, ಶಿವಾನಂದ ವಡಟ್ಟಿ ಅವರನ್ನು ಸನ್ಮಾನಿಸಲಾಯಿತು.
ತುಕಾರಾಮ ಜಾಧವ ಅವರು ರಚಿಸಿದ ಶಿವಾಜಿ ಮಹಾರಾಜರ ಕುರಿತ ‘ಭಾರತ ಮಾಣಿಕ್ಯ ಯುವಕರಿಗೆ ಸ್ಫೂರ್ತಿ’ ಕೃತಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ನಂತರ ಯುವಕರು ಡಿ.ಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಬಾನಿ ಓಣಿ ಕೇಸರಿಮಯವಾಗಿತ್ತು. ಶ್ರೀರಾಮನ ಚಿತ್ರವಿದ್ದ ಧ್ವಜಗಳು ಎಲ್ಲೆಡೆ ರಾರಾಜಿಸಿದವು.
ಧಾರವಾಡ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಈಶ್ವರ ಶಿರಕೋಳ, ಉದ್ಯಮಿ ವಜ್ರಮುನಿ ಶಿರಕೋಳ, ಕೃಷ್ಣ ಗಂಡಗಾಳೇಕರ, ಶಿವಾನಂದ ಸತ್ತಿಗೇರಿ, ಮಲ್ಲಪ್ಪ ಶಿರಕೋಳ, ವಿನಯ ಸಜ್ಜನರ, ರಮೇಶ ವಾಘಮೋಡೆ ಇತರರು ಉಪಸ್ಥಿತರಿದ್ದರು.