ಹುಣಸೂರು: ನಾವು ನವೆಂಬರ್ ತಿಂಗಳ ಕನ್ನಡಿಗರಾಗದೇ ಜೀವಮಾನದ ಕನ್ನಡಿಗರಾಗೋಣ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಕರೆ ನೀಡಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ), ಕಾಲೇಜಿನ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಗೀತೆಗಳ ಗಾಯನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನೆಲ, ಜಲ, ಭಾಷೆಯನ್ನು ಉಳಿಸಿ ಬೆಳೆಸಲು, ಸಾಹಿತಿಗಳು, ಹೋರಾಟಗಾರರು ಅಪಾರವಾಗಿ ಶ್ರಮಿಸಿದ್ದಾರೆ. ನಾವು ನವೆಂಬರ್ ಕನ್ನಡಿಗರಾಗದೆ ಸದಾ ಕನ್ನಡ ಭಾಷೆಯನ್ನು ಬಳಸಬೇಕು. ನಾಡು, ನುಡಿಗಾಗಿ ದುಡಿದ ಸಾಧಕರನ್ನು ಸ್ಮರಿಸಿಕೊಳ್ಳಬೇಕು. ಜೀವನದಲ್ಲಿ ಕಷ್ಟಪಟ್ಟು ಪ್ರಾಮಾಣಿಕವಾಗಿ ಮುಂದೆ ಬಂದವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಬರಲು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕಾರಣರಾಗಿದ್ದಾರೆ. ಕನ್ನಡ ನೆಲ, ಜಲ, ಭಾಷೆ ಉಳಿವಿಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪ್ರಧಾನ ಭಾಷಣ ಮಾಡಿದ ರಾವಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಲಕ್ಷ್ಮೀಕಾಂತ್, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ಹಿಂದೆ ಕಾವೇರಿಯಿಂದ ಗೋದಾವರಿ ವರೆಗೆ ಕನ್ನಡ ನಾಡು ಹರಡಿತ್ತು. ಹಳಗನ್ನಡ, ನಡುಕನ್ನಡದ ಕಾವ್ಯ, ತ್ರಿಪದಿಗಳು, ದಾಸರ ಪದಗಳು, ವಚನಗಳು ಕನ್ನಡ ಶ್ರೀಮಂತವಾಗುವಂತೆ ಮಾಡಿವೆ. ವಚನ ಸಾಹಿತ್ಯ ಸಾಮಾಜಿಕ ಜಾಗೃತಿ ಉಂಟು ಮಾಡಿದೆ. ಸರಳ ಮಾತುಗಳಲ್ಲಿ ಬಸವಾದಿ ಶರಣರು ಮೌಲ್ಯಗಳನ್ನು ತಿಳಿಸಿದ್ದಾರೆ. ಕನ್ನಡ ಸೊಗಸಾದ, ಇಂಪಾದ ಭಾಷೆ. ವಿಶ್ವ ಲಿಪಿಗಳಿಗೆ ರಾಣಿಯಾಗಿದೆ. ಕನ್ನಡ ನಾಡು ರಸಋಷಿಗಳ ನಾಡು, ಸೌಂದರ‌್ಯದ ನೆಲೆವೀಡಾಗಿದೆ. ಕನ್ನಡ ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದ್ದು, ಪಂಪನಿಂದ ಇಲ್ಲಿಯವರೆಗೆ ಕವಿಗಳು, ಲೇಖಕರು ಕನ್ನಡದ ತೇರು ಎಳೆದಿದ್ದಾರೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವ ಭಾಷೆ ಇದಾಗಿದ್ದು, ವಿದ್ಯಾರ್ಥಿಗಳು ಕನ್ನಡದ ಕವಿಗಳು, ಲೇಖಕರ ಕೃತಿಗಳನ್ನು ಓದಬೇಕು. ಕನ್ನಡ ಸಾಹಿತ್ಯಕ್ಕೆ ಇಂಗ್ಲಿಷ್ ಪ್ರೊಫೆಸರ್‌ಗಳ ಕೊಡುಗೆಯೂ ಬಹಳಷ್ಟಿರುವುದನ್ನು ಮರೆಯುವಂತಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಕವಿತಾ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಕೆ.ಮಹದೇವ ಆಶಯ ನುಡಿಗಳನ್ನಾಡಿದರು. ರಂಗಗೌರವ ಪ್ರಶಸ್ತಿ ಪುರಸ್ಕೃತ ಎ. ನಾರಾಯಣ ರೈ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಎಸ್.ಜಯರಾಮು, ಆಯರಹಳ್ಳಿ ಪ್ರವೀಣ್, ರಾಷ್ಟ್ರಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಎಚ್.ಎನ್.ಗಿರೀಶ್, ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ 15 ಚಿನ್ನದ ಪದಕಗಳನ್ನು ಪಡೆದ ಶ್ರೀವಿದ್ಯಾ, ಕಿರುಚಿತ್ರ ಸಂಕಲನಕಾರ ಪ್ರಶಸ್ತಿ ಪಡೆದ ಎಂ.ಸುಹಾಸ್ ಅವರನ್ನು ಅಭಿನಂದಿಸಲಾಯಿತು.
ಮುಖಂಡರಾದ ಹರಿಹರ ಆನಂದಸ್ವಾಮಿ, ಡಾ.ಎಸ್.ಶ್ರೀಕಾಂತ್, ಸತ್ಯಪ್ಪ, ಕಸಾಪ ಗೌರವ ಕಾರ್ಯದರ್ಶಿ ಟಿ.ಲೋಕೇಶ್, ರಂಗಭೂಮಿ ನಟ ಕುಮಾರ್ ಅರಸೇಗೌಡ, ಐಕ್ಯೂಎಸಿ ಸಂಚಾಲಕ ಡಾ.ಬಸವರಾಜು, ಕನ್ನಡ ವಿಭಾಗದ ಸಂಯೋಜಕಿ ಡಾ.ತ್ರಿವೇಣಿ, ಕನ್ನಡ ಪ್ರಾಧ್ಯಾಪಕ ಬಿ.ರಮೇಶ್ ಕಸಾಪ ಪದಾಧಿಕಾರಿಗಳಾದ ಸಿ.ಎಸ್.ಮಹೇಶ್, ಮಹದೇವಮ್ಮ, ಭಾಗ್ಯಾ, ವೆಂಕಟಯ್ಯ, ಎ.ಎನ್.ತ್ರಿನೇಶ್, ವಾಸುಕಿ, ನಿಕಟಪೂರ್ವ ಅಧ್ಯಕ್ಷ ಸೋಮಶೇಖರ, ಗಾಯಕರಾದ ಸಿಂಗೇಶ್, ಅರ್ಚನಾ, ಸಮಾಜ ಸೇವಕ ಮಲ್ಲಿಕ್, ಕಾಲೇಜು ವಿದ್ಯಾರ್ಥಿಗಳು ಇದ್ದರು.