ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ ಗಾಣದಾಳದಲ್ಲಿ ಡಿಕೆ.ಶಿವಕುಮಾರ ಹೇಳಿಕೆ

raichur
raichur
Published on

ರಾಯಚೂರು ಬಿಜೆಪಿ ನಾಯಕರಿಗೆ ರಾಜ್ಯದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲೆಸೆದರು.

ತಾಲೂಕಿನ ಗಾಣದಾಳ ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಬುಧವಾರ ಮಾತನಾಡಿ, ಬಿಜೆಪಿ ನಾಯಕರೇ, ನೀವು ನಿಗದಿ ಮಾಡುವ ಸಮಯಕ್ಕೆ ನಾನು ಬರುತ್ತೇನೆ. ನಾನು ಈಗಾಗಲೇ ಸುಮಾರು 10 ಬಾರಿ ಕೇಂದ್ರ ಸಚಿವರು ಹಾಗೂ ಪ್ರಧಾನಿಗಳ ಮುಂದೆ ಗೋಗರೆದಿದ್ದೇನೆ. ಆದರೂ ಅವರು ಸಹಾಯ ಮಾಡಿಲ್ಲ. ಕೇಂದ್ರ ಬಜೆಟ್ನಲ್ಲಿ ಘೋಷಿಸಿದ 5300 ಕೋಟಿ ಇದುವರೆಗೂ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ನಮ್ಮ ದೇಶದಲ್ಲಿ ರಾಮನ ತಂದೆ ದಶರಥ ಮಹಾರಾಜನಿಗಿಂತ ರಾಮನ ಭಂಟ ಹನುಮಂತನ ದೇವಾಲಯ ಎಲ್ಲಾ ಕಡೆ ಇವೆ. ಆಂಜನೇಯ ಸಮಾಜ ಸೇವಕ, ತ್ಯಾಗಿ. ಸಮಾಜದಲ್ಲಿ ಯಾರು ಸೇವೆ ಮಾಡುತ್ತಾರೋ ಸಮಾಜ ಅವರನ್ನು ಗುರುತಿಸುತ್ತದೆ. ಇದಕ್ಕೆ ಪಂಚಮುಖಿ ಆಂಜನೇಯನೇ ಸಾಕ್ಷಿ. ಹೀಗಾಗಿ ಜನರ ಮಧ್ಯೆ ನಿಷ್ಪಕ್ಷಪಾತವಾಗಿ, ಸೇವಾ ಮನೋಭಾವದಲ್ಲಿ ಕೆಲಸ ಮಾಡಿದರೆ ಸಮಾಜ ನಮ್ಮನ್ನು ಗುರುತುಸುತ್ತದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಾರಣಕ್ಕೆ ಕಾರ್ಯಕರ್ತರಿಗೆ ಗ್ಯಾರಂಟಿ ಸಮಿತಿ ಸೇರಿದಂತೆ ಅನೇಕ ನಿಗಮ ಮಂಡಳಿಯಲ್ಲಿ ಅಧಿಕಾರ ನೀಡಲಾಗಿದೆ. ಯಾರು ನಿಸ್ವಾರ್ಥದಿಂದ ದುಡಿಯುತ್ತಾರೋ ಅವರನ್ನು ಪಕ್ಷ ಸಮಾಜ ಗೌರವಿಸುತ್ತದೆ. ನಿಮಗೆ ಯಾವುದೇ ಹುದ್ದೆ ಸಿಕ್ಕಿರಲಿ ಅದನ್ನು ಸಣ್ಣದು, ಚಿಕ್ಕದು ಎಂದು ಭಾವಿಸಬೇಡಿ. ರಾಜಕಾರಣದಲ್ಲಿ ಯಾರು ಯಾವ ಮಟ್ಟಕ್ಕೆ ಬೇಕಾದರೂ ಬೆಳೆಯಬಹುದು ಎಂದು ಸಲಹೆ ನೀಡಿದರು.

ನೀವು ನಿಮ್ಮ ಬೂತ್‌ಗಳಲ್ಲಿ ನಾಯಕತ್ವ ವಹಿಸಿಕೊಳ್ಳಬೇಕು. ಬಿಎಲ್ಎಗಳು ನಮಗೆ ಬೂತ್ ಮಟ್ಟದಲ್ಲಿ ಮುನ್ನಡೆ ತಂದುಕೊಡುತ್ತಾರೆ. ಹೀಗಾಗಿ ಆತನೇ ನಿಜವಾದ ನಾಯಕ. ನಿಮ್ಮ ಹೋರಾಟ ಬಿಜೆಪಿ ಹಾಗೂ ದಳದವರ ಮೇಲೆ ಇರಬೇಕೆಹೊರತು ಕಾಂಗ್ರೆಸಿಗರ ಮೇಲಲ್ಲ. ದ್ವೇಷ ಮುಖ್ಯ ಅಲ್ಲ, ಸಂಘಟನೆ ಮುಖ್ಯ. ನಾವು ನಿಮಗೆ ಎಂತಹ ಸಂಘಟನೆ ನೀಡಿದ್ದೀವಿ. ಈ ದೇಶದ ಇತಿಹಾಸದಲ್ಲಿ ಯಾವುದೇ ರಾಜ್ಯ ಸರ್ಕಾರ ಮಾಡದ ಕೆಲಸ ನಾವು ಮಾಡುತ್ತಿದ್ದೇವೆ. ಕರ್ನಾಟಕ ಚುನಾವಣೆ ಬಳಿಕ ನಮ್ಮ ಸರ್ಕಾರ ಐದು ಗ್ಯಾರಂಟಿ ನೀಡಿದ್ದು, ಬಿಜೆಪಿ ನಾಯಕರು ಇದನ್ನು ಟೀಕೆ ಮಾಡಿದರು. ಯಡಿಯೂರಪ್ಪ ಆವರು ಒಂದು ಅಕ್ಕಿ ಕಾಳು ಕಡಿಮೆಯಾದರೂ ನಾವು ಸಹಿಸುವುದಿಲ್ಲ ಎನ್ನುತ್ತಿದ್ದರು. ನಾವು ಮೊದಲ ಸಂಪುಟ ಸಭೆಯಲ್ಲಿ ಎಲ್ಲಾ ಯೋಜನೆ ಜಾರಿಗೆ ಅನುಮೋದನೆ ನೀಡಲಾಯಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ್, ಶಾಸಕರಾದ ಬಸನಗೌಡ ದದ್ದಲ್, ಬಸನಗೌಡ ತುರುವಿಹಾಳ, ಹಂಪಯ್ಯ ನಾಯಕ್, ಎಂಎಲ್ಸಿಗಳಾದ ಬಸನಗೌಡ ಬಾದರ್ಲಿ, ಎ.ವಸಂತ ಕುಮಾರ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net