ರಾಗ-ದ್ವೇಷ ಬದಿಗೊತ್ತಿ ಪ್ರೀತಿ ಸಾರೋಣ

mysore dasara
Published on

ಮೈಸೂರು: ಮೋಹದಲ್ಲಿ ಬೆರೆತೆ, ದ್ವೇಷದಲ್ಲಿ ಕೊಳೆತೆ, ದುಷ್ಕೃತ್ಯದಲ್ಲಿ ಮುಳುಗಿ, ನಿನ್ನ ನೀನು ಮರೆತೆ…!


ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಾದೇಶಿಕ ಕವಿಗೋಷ್ಠಿಯಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರ ಮನಸ್ಸಿಗೆ ತಾಗಿದ ಕವಿತೆಯ ಸಾಲುಗಳು ಇವು. ಮೈಸೂರಿನ ಭಂತೆ ಕಲ್ಯಾಣಸಿರಿ ಅವರ ‘ನಿಲ್ಲು ಮನವೇ ಅಲ್ಲೇ’ ಕವನ ಎಲ್ಲರ ಮನವನ್ನು ಕಾಡಿತು.


‘ನಿಲ್ಲು ಮನವೇ ಅಲ್ಲೇ, ಎತ್ತ ಸಾಗುತ್ತಿರುವೆ/ ಅತ್ತ ಇತ್ತ ಸುತ್ತಮುತ್ತ ಏನು ಹುಡುಕುತಿರುವೆ/ ಮೋಹದಲ್ಲಿ ಬೆರೆತೆ, ದ್ವೇಷದಲ್ಲಿ ಕೊಳೆತೆ, ದೃಷ್ಕೃತ್ಯದಲ್ಲಿ ಮುಳುಗಿ, ನಿನ್ನ ನೀನು ಮರೆತೆ, ಒಂದೇ ಒಂದು ಘಳಿಗೆ ನಿಲ್ಲು ನಿನ್ನೊಳಗೆ/ ನೋಡು ಒಮ್ಮೆ ನೀನ ನೀನೇ, ನಿನ್ನದು ಏನು ಇದೆ?’ ಎಂದು ದ್ವೇಷಕಾರುವ ಜನರನ್ನು ಪ್ರಶ್ನಿಸಿದರು.

ಜಗವ ಎಲ್ಲ ಕೊಳೆ ತೊಳೆಯುವ ನೀರು ಆಗಬೇಕು..!


ಇದೇ ಧಾಟಿಯಲ್ಲಿ ಬಳ್ಳಾರಿಯ ದಸ್ತಗಿರಿ ಸಾಬ್ ದಿನ್ನಿ ಅವರು ಘಜಲ್ ವಾಚಿಸಿ ಮಾನವೀಯತೆಯ ಸಂದೇಶ ಸಾರಿದರು. ‘ಜಗವ ಎಲ್ಲ ಕೊಳೆ ತೊಳೆಯುವ ನೀರು ಆಗಬೇಕು../ ಸುಡುವ ನೆಲದ ಎದೆಯ ಗಾಯ ಮಾಯಿಸುವ ಮುಲಾಮು ಆಗಬೇಕು…!’ ಎಂದು ಹೇಳುವ ಮೂಲಕ ದ್ವೇಷ ಎಂಬ ಕೊಳೆ ತೊಳೆದು ಶಾಂತಿ ಎಂಬ ಮಳೆ ಸುರಿಸಬೇಕೆಂದು ಸೂಚ್ಯವಾಗಿ ಹೇಳಿದರು.


ರಾಯಚೂರಿನ ಉಮರ್ ದೇವರಮನೆ ಅವರು ‘ಅಪರಿಚಿತರು ಇರುವುದಿಲ್ಲ’ ಎಂಬ ಘಜಲ್ ಮೂಲಕ ಪ್ರೀತಿಯ ಮಹತ್ವವನ್ನು ತಿಳಿಸಿದ್ದು ಹೀಗೆ…
‘ಪ್ರೀತಿ ಚೆಲ್ಲಿ ವೈರಾಗ್ಯ ಅಳಿಸುವ ಸಖಿಯರು ಇರುವವರು, ವಿಶ್ವಾಸಕ್ಕೆ ಬೆಲೆ ಕಟ್ಟುವ ವ್ಯಾಪಾರಿಗಳು ಇಲ್ಲಿಲ್ಲ, ಪ್ರೀತಿಯ ಮಧುಶಾಲೆಯಲ್ಲಿ ಅಪರಿಚಿತರು ಇರುವುದಿಲ್ಲ, ದ್ವೇಷಕಾರುವ ಬೀಗದ ಕೈಗಳು ಕಳೆದು ಹೋಗಿವೆ ಇಲ್ಲಿ…, ಇಲ್ಲಿ ಯಾರಿಂದಲೂ ಸೇಡಿನ ಬಂಧನ ಇರುವುದಿಲ್ಲ..!’ ಎಂದು ಹೇಳುವ ಮೂಲಕ ಮಾನವೀಯತೆ ಮುಖ್ಯವೇ ಹೊರತು, ದ್ವೇಷವಲ್ಲ ಎಂಬ ಸಂದೇಶ ನೀಡಿದರು. ಅಲ್ಲದೆ, ಯುದ್ಧಪೀಡಿತ ಯೂಕ್ರೇನ್, ಪ್ಯಾಲೆಸ್ತೈನ್ ದೇಶದಲ್ಲಿ ಹಿಂಸೆ ಬಿಟ್ಟು, ಪ್ರೀತಿ ಬಿತ್ತಬೇಕು ಎಂದರು.

ಜೋಳದ ಒಂದು ತೆನೆ....!


ವಿಜಯಪುರದ ಸುಮಿತ್ ಮೇತ್ರಿ ಅವರು ‘ಜೋಳದ ಒಂದು ತೆನೆ’ ಎಂಬ ಶೀರ್ಷಿಕೆಯ ಕವನ ಓದಿದರು. ‘ನೆರಳು ಕೊಡದ ಮರದ ಕೆಳಗೆ ಎಷ್ಟು ಹೊತ್ತು ನಿಲ್ಲುವುದು ಗೆಳೆಯ../ ಆ ಬೀದಿ ಹೆಂಗಸರನ್ನು ನೋಡು/ಅಂಬೆಗಾಲಿಡುವ ಹಸಿವಿನ ಒಡಲಿಗೆ ತುತ್ತು ನೀಡುತ್ತಾಳೆ.., ಅರಮನೆಯ ಮೂಕಗೋಡೆಗೆ ದುಬಾರಿ ಬೆಲೆಯ ಜೋಳದ ಒಂದು ತೆನೆ ಕಟ್ಟಿಹಾಕಿ, ತೈಲವರ್ಣದ ಪುಟ ತೂಗಿ ಹಾಕಲಾಗಿದೆ…’ ಎಂಬ ಕವಿತೆ ಸಭಿಕರ ಚಪ್ಪಾಳೆ ಗಿಟ್ಟಿಸಿತು. ಗಂಗಾವತಿಯ ಮುಮ್ತಾಜ್ ಬೇಗಂ ಅವರು ‘ಅರಿವಿನ ಬೆಳಕು’ ಎಂಬ ಕವನದ ಮೂಲಕ ಮುಸ್ಲಿಂ ಮಹಿಳೆಯರ ತವಕ-ತಲ್ಲಣಗಳನ್ನು ಬಿಚ್ಚಿಟ್ಟರು.

ಮಹಾನ್ ತ್ಯಾಗಿ...


‘ನಮ್ಮೊಳಗೂ ಒಂದು ಟ್ರಿಗರ್ ಇದೆ’ ಎಂಬ ಕವನವನ್ನು ಸುನಂದ ಪ್ರಕಾಶಕಡಮೆ ವಾಚಿಸಿದರು. ಮಂಡ್ಯದ ನೀ.ಗೂ.ರಮೇಶ್ ಅವರು ‘ಗಾಂಧಿ-ಮರ’, ಕಲಬುರಗಿಯ ರೇಣುಕಾ ಹೆಳವರ ಅವರು ‘ಪ್ರೇಮ ವಿಕೋಪ’, ಗದಗಿನ ಆರ್.ಕೆ.ಬಾಗವಾನ್ ಅವರು ‘ಅಪ್ಪ ನೀ ಇರಬೇಕಿತ್ತು’, ಕಲಬುರಗಿಯ ಚಿ.ಸಿ.ನಿಂಗಣ್ಣ ಅವರು ‘ಮಹಾನ್ ತ್ಯಾಗಿ’, ದಾವಣಗೆರೆಯ ಪಿ.ವೀಣಾ ಅವರು ‘ನಮ್ಮ ಕರುನಾಡು ದಸರಾ’, ಚಿಕ್ಕಮಗಳೂರಿನ ಡಿ.ನಳಿನಾ ಅವರು ‘ಮೈಸೂರು ದಸರಾ’ ಕವನ ವಾಚಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 34 ಕವಿಗಳು ಕವನ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net