

ಬ್ಯಾಡಗಿ: ಅಮೃತ ಮಿತ್ರ ಯೋಜನೆಯಡಿ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿರುವ ಉದ್ಯಾನ, ರಸ್ತೆ ಪಕ್ಕ, ವಿಭಜಕಗಳಲ್ಲಿ ಸಾವಿರ ಸಸಿ ನೆಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ ತಿಳಿಸಿದರು.
ಪಟ್ಟಣದ ರಟ್ಟಿಹಳ್ಳಿ-ಬ್ಯಾಡಗಿ ರಸ್ತೆಯ ವಿಭಜಕಗಳಲ್ಲಿ ಶುಕ್ರವಾರ ಸಸಿ ನೆಟ್ಟು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಮ್ಮಿಕೊಂಡ ಅಮೃತ ಮಿತ್ರ ಯೋಜನೆಯಲ್ಲಿ ಮೊದಲ ಹಂತದಲ್ಲಿ ಪಟ್ಟಣದಲ್ಲಿ 500 ಸಸಿ, ಎರಡನೇ ಹಂತದಲ್ಲಿ 500 ಸಸಿ ಬೆಳೆಸಲಾಗುವುದು. ಇದಕ್ಕೆ ಆಯಾ ವಾರ್ಡ್ ಸದಸ್ಯರು, ಪರಿಸರ ಪ್ರೇಮಿಗಳು, ಸಾಮಾಜಿಕ ಹೋರಾಟಗಾರರು, ನಾಗರಿಕರು ಮುಂದಾಳತ್ವ ವಹಿಸಿಕೊಂಡು ಗಿಡಗಳನ್ನು ರಕ್ಷಿಸುವ ಮೂಲಕ ಪರಿಸರ ಉಳಿಸಲು ಸಹಕರಿಸಬೇಕಿದೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಪುರಸಭೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಎಲ್ಲೆಡೆ ಸಸಿಗಳನ್ನು ಬೆಳೆಸಲು ಶ್ರಮಿಸಬೇಕು. ಸರ್ಕಾರ ಪರಿಸರ ಉಳಿಸಿ ಬೆಳೆಸಲು ಸಾಕಷ್ಟು ಅನುದಾನ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಚೇರಮನ್ ಚನ್ನವೀರಪ್ಪ ಶೆಟ್ಟರ, ಸದಸ್ಯರಾದ ಸರೋಜ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ಮಲ್ಲಮ್ಮ ಪಾಟೀಲ, ಫಕೀರಮ್ಮ ಚಲವಾದಿ, ಶಂಕರ ಕುಸಗೂರು, ರಾಮಣ್ಣ ಕೋಡಿಹಳ್ಳಿ, ಹನುಮಂತಪ್ಪ ಮಾಳಗಿ, ಮಂಜುನಾಥ ಬಾರ್ಕಿ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಬರೋಡ ಬ್ಯಾಂಕ್ ವ್ಯವಸ್ಥಾಪಕ ಚಿದಾನಂದ ಮಾಗಳದ, ಸಹಾಯಕ ಅಧಿಕಾರಿ ಪಿ.ಎಂ.ಚೇತನ, ಬಿ.ವಿರೂಪಾಕ್ಷಿ, ಪ್ರಿಯಾಂಕ ಕಾಂಬ್ಲೆ ಇತರರಿದ್ದರು.