ಸುರಕ್ಷಿತ ಚಾಲನೆಗೆ ಆದ್ಯತೆ ನೀಡಲಿ

Oplus_16908290
ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಅಯೋಜಿಸಿದ್ದ ಆಯುಧ ಪೂಜೋತ್ಸವದ ಸಮಾರೋಪ ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಬಾಲಕೃಷ್ಣ, ಗಿರೀಶ್, ಸುರೇಶ್, ಶ್ರೀನಿವಾಸ್ ಇದ್ದರು.
Published on

ಸೋಮವಾರಪೇಟೆ: ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಆಯುಧ ಪೂಜೋತ್ಸವದ ಸಮಾರೋಪ ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಪ್ರತಿ ವರ್ಷ ಅದ್ದೂರಿಯಾಗಿ ಆಯುಧ ಪೂಜೆ ನಡೆಯಿತು. ಪೂಜೆ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ದಸರಾ ಸಂದರ್ಭ ಕೇವಲ ಒಂದು ದಿನಕ್ಕೆ ಮಾತ್ರ ಸಂಭ್ರಮ ಮೀಸಲಾಗದೆ ಮುಂದಿನ ವರ್ಷಗಳಲ್ಲಿ 9 ದಿನವೂ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಆಶಿಸಿದರು.

ಇದರೊಂದಿಗೆ ಸಂಘದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಚಾಲಕರು ತಮ್ಮ ವೃತ್ತಿಯಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕು. ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು. ಕುಟುಂಬವನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು.

ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ ಮಾತನಾಡಿ, ಸೋಮವಾರಪೇಟೆಯಲ್ಲಿ ವರ್ಷಕ್ಕೊಮ್ಮೆ ಜನೋತ್ಸವವಾಗಿ ನಡೆಯುವ ಆಯುಧ ಪೂಜೋತ್ಸವಕ್ಕೆ ಸರ್ಕಾರದಿಂದ ಕನಿಷ್ಠ 50 ಲಕ್ಷ ರೂ.ಅನುದಾನ ಒದಗಿಸಲು ಶಾಸಕರು ಮುಂದಾಗಬೇಕೆಂದು ಮನವಿ ಮಾಡಿದರು.

ಯುವ ಜನಾಂಗ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದ ಅವರು, ಭವಿಷ್ಯದಲ್ಲಿ ಉದ್ಯೋಗಕ್ಕೆ ಇಂಗ್ಲಿಷ್ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದರೊಂದಿಗೆ ಇಂಗ್ಲಿಷ್ ಜ್ಞಾನವನ್ನೂ ತುಂಬಬೇಕು ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಹಿಸಿದ್ದರು.

ಗೌಡಳ್ಳಿ ವಿಎಸ್‌ಎಸ್‌ಎನ್ ನಿರ್ದೇಶಕ ಎಚ್.ಆರ್. ಸುರೇಶ್, ಉದ್ಯಮಿ ಎನ್.ಎಸ್. ಜಯರಾಮ್, ಎನ್.ಎಸ್.ಶ್ರೀನಿವಾಸ್, ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ, ಸೋಮವಾರಪೇಟೆ ವಿಎಸ್‌ಎಸ್‌ಎನ್ ಉಪಾಧ್ಯಕ್ಷ ಹುಲ್ಲೂರಿಕೊಪ್ಪ ಚಂದ್ರು, ನಿರ್ದೇಶಕ ಕರ್ಕಳ್ಳಿ ಸುಭಾಷ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್, ಗುತ್ತಿಗೆದಾರ ಚೌಡ್ಲು ಚೇತನ್, ಸೂಡಾ ಅಧ್ಯಕ್ಷ ಕೆ.ಎ. ಆದಂ, ಪ.ಪಂ. ಸದಸ್ಯ ಕಿರಣ್ ಉದಯಶಂಕರ್, ಜೇಸಿ ಮಾಜಿ ಅಧ್ಯಕ್ಷ ಎಸ್.ಆರ್. ವಸಂತ್ ಇತರರು ಇದ್ದರು.

ನಂತರ ಕನ್ನಡ ಚಲನಚಿತ್ರ ರಂಗದ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net