

ಗುರುಪುರ: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ‘ಗ್ರಾಮ ಚದುರಂಗ(ಚೆಸ್) ಆಡೋಣ ಅಭಿಯಾನ’ ನಡೆಯಿತು.
ಪಂದ್ಯಾಟ ಉದ್ಘಾಟಿಸಿದ ಪಂಚಾಯಿತಿ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಮಾತನಾಡಿ, ಚೆಸ್ ಆಟದಿಂದ ಶಾಲಾ ಮಕ್ಕಳ ಬೌದ್ಧಿಕ ಮಟ್ಟ ವೃದ್ಧಿಸುತ್ತದೆ. ಮಕ್ಕಳ ಶಾಲಾ ಕಲಿಕೆಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ಪಿಡಿಒ ಅಬೂಬಕ್ಕರ್ ಮಾತನಾಡಿ, ಸರ್ಕಾರ ಗ್ರಾಮೀಣ ಮಟ್ಟದ ಶಾಲಾ ಮಕ್ಕಳಿಗಾಗಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಮತ್ತು ಕ್ರೀಡೆಯಲ್ಲೂ ಸಾಮರ್ಥ್ಯ ವ್ಯಕ್ತಪಡಿಸಿ ಗ್ರಾಮಕ್ಕೆ ಹೆಸರು ತಂದು ಕೊಡಬೇಕು ಎಂದರು.
ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಪ್ರಾಥಮಿಕ ಮತ್ತು ಹೈಸ್ಕೂಲ್, ಬೆಥನಿ ಹೈಸ್ಕೂಲ್ ಹಾಗೂ ಗುರುಪುರದ ಸರ್ಕಾರಿ ಪ್ರೌಢಶಾಲಾ ಮಕ್ಕಳು ಚೆಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಪಂಚಾಯಿತಿ ಉಪಾಧ್ಯಕ್ಷೆ ದಿಲ್ಶಾದ್, ಸದಸ್ಯರಾದ ಜಿ.ಎಂ. ಉದಯ ಭಟ್, ಸಚಿನ್ ಅಡಪ, ಬುಶ್ರಾ, ಕಾರ್ಯದರ್ಶಿ ಅಶೋಕ್, ಪಂದ್ಯಾಟ ನಿರ್ವಾಹಕರಾದ ಸುದರ್ಶನ್, ಅಶ್ವಿತಾ, ಇರ್ಶಾದ್ ಉಪಸ್ಥಿತರಿದ್ದರು.