ಹೋರಾಟಗಾರರೊಂದಿಗೆ ಮಾತುಕತೆಗೆ ಮುಂದಾಗಲಿ: ಬಡಗಲಪುರ ನಾಗೇಂದ್ರ ಆಗ್ರಹ

ಫೋಟೋ ಶೀರ್ಷಿಕೆ 26 ಸಿಆರ್_ಪಿ-1ಎ
ಬಡಗಲಪುರ ನಾಗೇಂದ್ರ
Published on

ಮೈಸೂರು: ಕೃಷಿ ಉತ್ಪನ್ನಗಳಿಗೆ ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಅನ್ವಯ ಬೆಂಬಲ ಬೆಲೆ ಕಾನೂನು ಖಾತ್ರಿಪಡಿಸಬೇಕೆಂದು ಹೋರಾಟ ನಡೆಸುತ್ತಿರುವ ಮುಖಂಡರೊಂದಿಗೆ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಂಜಾಬ್‌ನ ಹರಿದ್ವಾರದಲ್ಲಿ 37ದಿನಗಳಿಂದ ಅಮರಣಾಂತ ಉಪವಾಸ ನಡೆಸುತ್ತಿರುವ ರೈತ ಮುಖಂಡ ಜಗತ್‌ಸಿಂಗ್ ದಲ್ಲೇವಾಲ್ ಅವರ ಜೀವದ ಜತೆ ಚೆಲ್ಲಾಟ ನಿಲ್ಲಿಸಬೇಕು. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಅವರ ಸಾವು ಸಂಭವಿಸುವ ಆತಂಕ ರೈತ ಸಮುದಾಯಕ್ಕೆ ಕಾಡುತ್ತಿದ್ದು, ಅವರ ಜೀವಕ್ಕೆ ಅಪಾಯ ಎದುರಾದರೆ ಕೇಂದ್ರ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಹೊಸದಿಲ್ಲಿಯ ಸುತ್ತಮುತ್ತ ಕಳೆದ 384 ದಿನಗಳು ನಡೆದ ರೈತ ಆಂದೋಲನದಲ್ಲಿ ಕೇಂದ್ರ ಸರ್ಕಾರ 786 ಜನರನ್ನು ಬಲಿ ತೆಗೆದುಕೊಂಡಿದೆ. ಆದರೆ, ಈಗಲೂ ಚಳವಳಿ ಮುಂದುವರಿದಿದ್ದು, ಇನ್ನೆಷ್ಟು ಜನ ರೈತರ ಬಲಿ ಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಒತ್ತು ನೀಡಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹ. ಸಭೆಯಲ್ಲಿ ಈ ಭಾಗದ ಕುಡಿಯುವ ನೀರು, ಸಣ್ಣ ನೀರಾವರಿ, ಶಿಕ್ಷಣ, ಕೃಷಿ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯಗಳಿಗೆ ಹೆಚ್ಚು ಒತ್ತು ನೀಡುವ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಕಳೆದ ಆರೇಳು ತಿಂಗಳಿಂದ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ರಾಜ್ಯದ ಹಾಲು ಉತ್ಪಾದಕರಿಗೆ 622 ಕೋಟಿ ರೂ. ಬಾಕಿ ಬರಬೇಕು. ಸರ್ಕಾರದಲ್ಲಿ ಹಣ ಇಲ್ಲದಿದ್ದರೆ ಐಎಎಸ್ ಅಧಿಕಾರಿಗಳಿಗೆ ಒಂದು ವರ್ಷದ ಸಂಬಳ ತಡೆ ಹಿಡಿದು, ದುಡಿಯುವ ವರ್ಗಗಳಿಗೆ ನೀಡಲಿ ಎಂದು ಆಗ್ರಹಿಸಿದರು.

ಮೈಸೂರು ಜಿಲ್ಲೆಯ ಸರಗೂರು ಮತ್ತು ಸಾಲಿಗ್ರಾಮ ಸೇರಿದಂತೆ ಹೊಸ ತಾಲೂಕುಗಳು ಘೋಷಣೆಯಾಗಿ ಬಹಳ ವರ್ಷಗಳಾಗಿವೆ. ಈ ತಾಲೂಕು ಕೇಂದ್ರಗಳಾಗಿ ಎದ್ದು ಕಾಣುವಂತಹ ಅಭಿವೃದ್ಧಿಗಳಾಗಿಲ್ಲ. ಕೂಡಲೇ ಈ ಬಜೆಟ್‌ನಲ್ಲಿ ಈ ತಾಲೂಕುಗಳಿಗೆ ವಿಶೇಷ ಯೋಜನೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ರೈತ ಮುಖಂಡ ಮಂಡಕಳ್ಳಿ ಮಹೇಶ್, ಮೀನಾಕ್ಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net