ವೃಕ್ಷೋತ್ಥಾನ್ ಹೆರಿಟೇಜ್ ರನ್ ಯಶಸ್ವಿಗೊಳಿಸೋಣ; ಎಡಿಸಿ ಮಹಾದೇವ ಮುರುಗಿ

VRUKSHOTTHAN TEACHERS MEETING
ವಿಜಯಪುರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023ರ ಕಾರ್ಯಕ್ರಮ ಹಿನ್ನೆಲೆ ಪ್ರಾಚಾರ್ಯರ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಿ.ಕೆ. ಹೊಸಮನಿ, ಮುರುಗೇಶ ಪಟ್ಟಣಶೆಟ್ಟಿ ಮತ್ತಿತರರಿದ್ದರು.
Published on

ವಿಜಯಪುರ: ಪರಿಸರ ಜಾಗೃತಿ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗಾಗಿ ಡಿ. 24 ರಂದು ನಗರದಲ್ಲಿ ಆಯೋಜಿಸಲಾಗಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023ರ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಶುಕ್ರವಾರ ನಡೆದ ಪಿಯು ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಕಾಲೇಜ್‌ಗಳ ಪ್ರಾಚಾರ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕೇವಲ ಶೇ. 0.17ರಷ್ಟಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಪ್ರಾರಂಭಿಸಿದ ಕೋಟಿ ವೃಕ್ಷ ಅಭಿಯಾನದ ಪರಿಣಾಮ ಈಗ ಅರಣ್ಯ ಪ್ರದೇಶ ಹೆಚ್ಚಾಗಿದೆ. ಈ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಸರ್ಕಾರಿ ಜಮೀನು, ಖಾಸಗಿ ಜಮೀನಿನಲ್ಲಿ ಈವರೆಗೆ 1.30 ಕೋಟಿ ಸಸಿ ನೆಡಲಾಗಿದೆ. ಈಗ ಅರಣ್ಯ ಪ್ರದೇಶ ಹೆಚ್ಚಳ ಮತ್ತು ಪ್ರಾಚೀನ ಸ್ಮಾರಕಗಳ ಬಗ್ಗೆ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023 ಆಯೋಜಿಸಲಾಗಿದೆ. ಎಲ್ಲ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಉಪನ್ಯಾಸಕರು ಸಕ್ರೀಯರಾಗಿ ಪಾಲ್ಗೋಳ್ಳಬೇಕು. ವಿದ್ಯಾರ್ಥಿಗಳಿಂದಲೂ ನೋಂದಣಿ ಮಾಡಿಸಬೇಕು. ಈ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಮಾಡಲು ಜಿಲ್ಲಾಡಳಿತದ ವತಿಯಿಂದ ಮನವಿ ಮಾಡುತ್ತಿದ್ದೇವೆ ಎಂದರು.

ವೃಕ್ಷೋತ್ಥಾನ್ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಮಾತನಾಡಿ, 2017ರಲ್ಲಿ ಪ್ರಾರಂಭವಾದ ಕೋಟಿ ವೃಕ್ಷ ಅಭಿಯಾನದ ಮುಂದುವರೆದ ಭಾಗವಾಗಿ ಈಗ ವೃಕ್ಷೋತ್ಥಾನ್ ಆಯೋಜಿಸಲಾಗುತ್ತಿದೆ. ಕಳೆದ ಬಾರಿ ನಡೆದ ಅಭಿಯಾನದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ, ಸಾಮಾಜಿಕ ಅರಣ್ಯ ವಿಭಾಗ ಹಾಗೂ ಕೆಬಿಜೆಎನ್‌ಎಲ್ ಅರಣ್ಯ ವಿಭಾಗದವರು ಪ್ರತಿವರ್ಷ ತಲಾ 25 ಲಕ್ಷದಂತೆ ಸಸಿಗಳನ್ನು ನೀಡಿದ್ದರು. ಅವುಗಳಲ್ಲಿ ಈಗ ಶೇ. 80ರಷ್ಟು ಸಸಿಗಳು ಸುಸ್ಥಿತಿಯಲ್ಲಿ ಬೆಳೆಯುತ್ತಿವೆ ಎಂದರು.

ಐದು ವಿಭಾಗಗಳಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಮ್ಯಾರಾಥಾನ್ ಆಯೋಜಿಸಲಾಗಿದೆ. ವೃತ್ತಿಪರರಿಗಾಗಿ 21 ಕಿಮೀ, 10 ಕಿಮೀ ಓಟ ನಡೆಯಲಿದ್ದು, ವಿಜಯಪುರ ನಗರದ ಎಲ್ಲ ಪ್ರಾಚೀನ ಸ್ಮಾರಕಗಳ ಎದುರು ಈ ಮ್ಯಾರಾಥಾನ್ ನಡೆಯಲಿದೆ. ಅಲ್ಲದೇ, ಪದವಿ ವಿದ್ಯಾರ್ಥಿಗಳಿಗಾಗಿ 5 ಕಿಮೀ ಓಟ, ಪಿಯು ವಿದ್ಯಾರ್ಥಿಗಳಿಗಾಗಿ 3.5 ಕಿಮೀ, ಹಿರಿಯ ನಾಗರಿಕರಿಗಾಗಿ ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ಓಟ ಆಯೋಜಿಸಲಾಗಿದೆ. ಎಲ್ಲ ಹಂತದ ಓಟ ಸೇರಿ ಒಟ್ಟು ರೂ. 8.12 ಲಕ್ಷದ ಬಹುಮಾನ ನೀಡಲಾಗುತ್ತಿದೆ. ನೋಂದಾಯಿತರಿಗೆ ಟಿ- ಶರ್ಟ್, ಪ್ರಶಸ್ತಿ, ಭಾಗಿಯಾದವರಿಗೆ ಮೆಡಲ್, ಟಿ- ಶರ್ಟ್ ಕೊಡಲಾಗುತ್ತಿದೆ ಎಂದರು.

ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಕೆ. ಹೊಸಮನಿ, ವೃಕ್ಷೋತ್ಥಾನ್ ಕೋರ್ ಕಮಿಟಿ ಸದಸ್ಯ ವೀರೇಂದ್ರ ಗುಚ್ಚೆಟ್ಟಿ, ಮಲ್ಲಿಕಾರ್ಜುನ ಯಲಗೊಡ, ಹಣಮಂತರಾಯ ಭೈರಗೊಂಡ, ನವೀದ ನಾಗಠಾಣ, ಸಿ.ಬಿ. ನಾಟಿಕಾರ ಮತ್ತು ಬಿ.ಪಿ. ಗಂಗನಳ್ಳಿ, ಎಂ. ಡಿ.ಹೆಬ್ಬಿ, ಎಸ್.ಬಿ. ಸಾವಳಸಂಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net