

ಹಳೇಬೀಡು : ವಿಶ್ವಾಸ, ಅನ್ಯೋನ್ಯತೆ ಮತ್ತು ಒಗ್ಗಟ್ಟಿನಿಂದ ನಡೆದರೆ ಮಾತ್ರ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿಸಲು ಸಾಧ್ಯ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಕೆ ಸುರೇಶ್ ಅಭಿಪ್ರಾಯಪಟ್ಟರು.
ಸಮೀಪದ ಪುರಾಣ ಪ್ರಸಿದ್ಧ ಮಲ್ಲಿಕಾರ್ಜುನಸ್ವಾಮಿ ದೇಗುಲದಲ್ಲಿ ಕಾರ್ತಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪುಷ್ಪಗಿರಿ ಮಠ ಮತ್ತು ದೇವಸ್ಥಾನದ ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಎಲ್ಲ ಭಕ್ತರು ಒಮ್ಮತದಿಂದ ಪಾಲ್ಗೊಂಡು ಹಿಂದಿನಿಂದ ನಡೆದುಕೊಂಡು ಬಂದಿರುವ ಪರಂಪರೆಯನ್ನು ಉಳಿಸಿ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಗೊಳಿಸಬೇಕು. ಕೆಲ ವರ್ಷಗಳಿಂದ ನಡೆಯುತ್ತಿರುವ ಶೀತಲ ಸಂಘರ್ಷದ ವಾತಾವರಣವನ್ನು ತಿಳಿಗೊಳಿಸಿಕೊಂಡು ಧಾರ್ಮಿಕ ಕಾರ್ಯಗಳಲ್ಲಿ ದೇಗುಲದ ಹಾಗೂ ಮಠದ ಭಕ್ತರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಾಮರಸ್ಯವನ್ನು ಸಾರಬೇಕು ಎಂದು ಹೇಳಿದರು.
ಕೆಂಡೋತ್ಸವ, ಎಣ್ಣೆ ಶಾಲೆ ಹಾಗೂ ಜಾತ್ರಾ ಉತ್ಸವಗಳಿಗೆ ಮಠದ ಶ್ರೀಗಳು ಚಾಲನೆ ನೀಡುವ ಪದ್ಧತಿ ನಿಂತು ಹೋಗಿದ್ದು, ಅದನ್ನು ಮರುಪ್ರಾರಂಭಿಸಿ, ಜಾತ್ರಾ ಮಹೋತ್ಸವಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಎಂ. ಮಮತಾ ಮಾತನಾಡಿ, ಮುಂದಿನ ನವೆಂಬರ್ 19ರಂದು ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿಯ ದಿವ್ಯ ಕೆಂಡೋತ್ಸವ ಜರುಗಲಿದ್ದು, ಡಿಸೆಂಬರ್ 1 ಮತ್ತು 2ರಂದು ಅಮಾವಾಸ್ಯೆ ಜಾತ್ರೆ ನಡೆಯಲಿದೆ. ಧಾರ್ಮಿಕ ಆಚರಣೆಗಳು ಎಂದಿನಂತೆ ಮುಂದುವರಿಯಲಿದ್ದು, ಡಿಜೆ ಹೊರತುಪಡಿಸಿ ಎಲ್ಲ ರೀತಿಯ ಕಲಾತಂಡಗಳ ಬಲ ಪ್ರದರ್ಶನಕ್ಕೆ ಅವಕಾಶ ಕಲ್ಪಸಿಕೊಡಲಾಗುತ್ತದೆ. ಜಾತ್ರಾ ಮಹೋತ್ಸವ ಅದ್ದೂರಿ ಮತ್ತು ಯಶಸ್ವಿಯಾಗಿ ನಡೆಯಲು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಸುತ್ತ ಮುತ್ತಲಿನ 12 ಹಳ್ಳಿಯ ಮುಖಂಡರನ್ನು ಕೋರಿದರು.
ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದ್ವೇಷ, ಅಸೂಯೆ, ಮತ್ಸರಗಳಿಂದ ಒಳ್ಳೆಯದೆಲ್ಲವನ್ನೂ ಕಳೆದುಕೊಳ್ಳುತ್ತೇವೆ. ಸ್ನೇಹ ಪರ ಗುಣಗಳು ಸೌಹಾರ್ದತೆ ಮತ್ತು ಶಾಂತಿಯನ್ನು ಬೆಸೆಯುತ್ತವೆ. ಹಿಂದೆ, ಆಗಿರುವ ಕಹಿ ಘಟನೆಗಳನ್ನು ಮರೆತು, ಶ್ರೀ ಮಠದ ಮತ್ತು ಮಲ್ಲಿಕಾರ್ಜುನ ಸ್ವಾಮಿ ಧಾರ್ಮಿಕ ಕಾರ್ಯಗಳನ್ನು ಒಗ್ಗಟ್ಟಿನಿಂದ ನಡೆಸಲು ನಾವು ಮನಃಪೂರ್ವಕವಾಗಿ ಸಿದ್ದರಿದ್ದೇವೆ. ಉತ್ಸವಗಳಿಗೆ ಮಠದ ವತಿಯಿಂದ ಅಲ್ಪ ಕಾಣಿಕೆ ನೀಡುತ್ತೇವೆ ಎಂದರು.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಅನುದಾನದ ಕೊರತೆಯಿಂದಾಗಿ ದೇಗುಲದ ಅಭಿವೃದ್ಧಿ ಕುಂಠಿತವಾಗುತ್ತಿದ್ದು, ತಹಸೀಲ್ದಾರರು ಈ ಬಗ್ಗೆ ಗಮನಹರಿಸಿ ಸಹಕಾರ ನೀಡಬೇಕು ಎಂದರು.
ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮಸುಂದರ್, ಮುಖಂಡರಾದ ಅಡಗೂರು ಬಸವರಾಜು, ಶಂಕರಪ್ಪ, ಶಶಿಕುಮಾರ್, ಗಂಗಣ್ಣ, ಜಗದೀಶ್ ಚಂದ್ರಶೇಖರ್, ಅರ್ಚಕರಾದ ಮಂಜಪ್ಪ, ಗಂಗಾಧರ್, ಪ್ರೇಮಕುಮಾರ್, ದಿವಾಕರ್ ಹತ್ತು ಹಳ್ಳಿಗಳ ಮುಖ್ಯಸ್ಥರು ಇದ್ದರು.