ಬೆಳಗಾವಿ ಸಮಾವೇಶ ಯಶಸ್ವಿಗೊಳಿಸೋಣ

h5-Shephereds India 1
Published on

ಹುಬ್ಬಳ್ಳಿ: ಬೆಳಗಾವಿಯಲ್ಲಿ ಅಕ್ಟೋಬರ್ 2 ಮತ್ತು 3ರಂದು ಕುರುಬ ಸಮಾಜದ ಬೃಹತ್ ರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗಿದೆ. ಕುರುಬ ಸಮಾಜವನ್ನು ರಾಷ್ಟ್ರಾದ್ಯಂತ ಗುರುತಿಸುವಂತಾಗಬೇಕು. ಹೀಗಾಗಿ ನಾವೆಲ್ಲರೂ ಸೇರಿ ಸಮಾವೇಶವನ್ನು ಯಶಸ್ವಿಗೊಳಿಸೋಣ ಎಂದು ಶೆಫರ್ಡ್ಸ್ ಇಂಡಿಯಾ ಇಂಟರ್​ನ್ಯಾಷನಲ್​ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ ವಿನಂತಿಸಿದರು.

ಬೆಳಗಾವಿಯಲ್ಲಿ ನಡೆಯುವ ಸಮಾವೇಶದ ನಿಮಿತ್ತ ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಕುರುಬ ಸಮಾಜದ ಪೂರ್ವಭಾವಿ ಸಭೆಗೆ ಚಾಲನೆ ನೀಡಿ, ಅವರು ಮಾತನಾಡಿದರು.

ದೇಶದಲ್ಲಿ ಕುರುಬರ ಜನಸಂಖ್ಯೆ 12 ಕೋಟಿಯಷ್ಟಿದೆ. ಆದರೆ ಸಂಘಟನೆಯಾಗಬೇಕಿದೆ. ಶೈಕ್ಷಣಿಕವಾಗಿ, ರಾಜಕೀಯವಾಗಿ ಬೆಳೆಯಬೇಕಿದೆ. ಅಕ್ಟೋಬರ್ 2ರಂದು ‘ನಿಮ್ಮ ನಡಿಗೆ ಬೆಳಗಾವಿ ಕಡೆಗೆ’ ಎನ್ನುವಂತೆ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.

ಮಾಜಿ ಸಚಿವ, ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಶೈಕ್ಷಣಿಕವಾಗಿ, ಧಾರ್ವಿುಕವಾಗಿ ಸಮಾಜ ಬೆಳೆಯುತ್ತಿದೆ . ಇದಕ್ಕೆ ಕಾರಣ ದೇವರಾಜ ಅರಸು ಅವರ ಸಂಪುಟ ಹಾಗೂ ಉತ್ತರ ಕರ್ನಾಟಕ ಭಾಗದ ಸಮಾಜದ ಪ್ರಭಾವಿ ನಾಯಕರಾಗಿದ್ದ ಡಿ.ಕೆ. ನಾಯ್ಕರ ಎಂದರೆ ತಪ್ಪೇನು ಇಲ್ಲ ಎಂದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಮಾಜವನ್ನು ಸಂಘಟನೆ ಮಾಡಬೇಕು. ಒಂದು ವೇದಿಕೆಯಲ್ಲಿ ತರಬೇಕು ಎನ್ನುವ ನಿಟ್ಟಿನಲ್ಲಿ ಸತತವಾಗಿ ರಾಷ್ಟ್ರೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯಲ್ಲಿ ಆಯೋಜಿಸುತ್ತಿರುವುದು 9ನೇ ಸಮಾವೇಶ. ರಾಷ್ಟ್ರಮಟ್ಟದಲ್ಲೂ ಸಮಾಜದ ಬೇಡಿಕೆಗಳು ಈಡೇರಬೇಕು. ಅದಕ್ಕೆ ಸಂಘಟನೆ ಅವಶ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಲೋಹಿತ ನಾಯ್ಕರ್ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ನಡೆಯುವ ಸಮಾವೇಶವನ್ನು ಯಶಸ್ವಿಗೊಳಿಸಲು ಧಾರವಾಡ ಜಿಲ್ಲೆಯಿಂದ ಹೆಚ್ಚಿನ ಜನರನ್ನು ಸೇರಿಸಲಾಗುವುದು ಎಂದು ಭರವಸೆ ನೀಡಿದರು

ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಪ್ರಮುಖರಾದ ರಾಜೇಶ್ವರಿ ಸಾಲಗಟ್ಟಿ, ಪ್ರೇಮಲತಾ, ಬಸವರಾಜ ಮಲಕಾರಿ, ಶಿವಾನಂದ ಬೆಂತೂರ, ಪೀರಾಜಿ ಖಂಡೇಕರ, ಬೀರಪ್ಪ ಖಂಡೇಕರ, ನಾಗರಾಜ ಗುರಿಕಾರ, ಎಂ. ನಾಗರಾಜ, ಬಸವರಾಜ ಬಸಲಿಗುಂದಿ, ದೇವರಾಜ ಕಂಬಳಿ, ಹೂವಪ್ಪ ದಾಯಿಗೋಡಿ, ಸಿದ್ದಣ್ಣ ಪ್ಯಾಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net