

ಬಾಗಲಕೋಟೆ: ಚುನಾವಣೆ ಬಂದಾಗ ಲಿಂಗಾಯತ ಪ್ರೀತಿ ತೋರಿಸುವ ಕಾಂಗ್ರೆಸ್ ಈಗ ಆ ಸಮುದಾಯವರನ್ನು ಸಿಎಂ ಮಾಡಲಿ ನೋಡೋಣ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಸವಾಲು ಎಸೆದಿದ್ದಾರೆ.
ಸೋಮವಾರ ಬೀಳಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ, ಸ್ಪಷ್ಟ ಬಹುಮತ ಬಂದಿದ್ದರೂ ಸಿಎಂ ವಿಚಾರವಾಗಿ ಹಗ್ಗಾಜಗ್ಗಾಟ ನಡೆಸಿದ್ದಾರೆ. ಚುನಾವಣೆ ಪೂರ್ವದಲ್ಲಿ ವೀರಶೈವ ಲಿಂಗಾಯತರ ಬಗ್ಗೆ ಅನುಕಂಪದ ಮಾತನ್ನು ಆಡುತ್ತಿದ್ದರಲ್ವೇ. ಹಾಗಿದ್ದರೆ ಅವರನ್ನು ಸಿಎಂ ಮಾಡಲಿ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಹೋಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ ಆಗಲು ಎಲ್ಲ ಅರ್ಹತೆ ಹೊಂದಿದ್ದಾರೆ. ಅವರಿಗೆ ಆಡಳಿತ ನಡೆಸಿರುವ ಅನುಭವ ಇದೆ. ಅಲ್ಲದೇ ಆರೇಳು ಸಲ ಗೆದ್ದಿರುವ ಎಂ.ಬಿ. ಪಾಟೀಲ ಇದ್ದಾರೆ. ವಯಸ್ಸಿನಲ್ಲಿ ಹಿರಿಯರಾದ ಶಾಮನೂರ ಶಿವಶಂಕರಪ್ಪ ಇದ್ದಾರೆ. ಇವರಲ್ಲಿ ಯಾರಾದರೊಬ್ಬರನ್ನು ಸಿಎಂ ಮಾಡಲಿ. ಈ ವರೆಗೂ ಸಿಎಂ ರೇಸ್‌ನಲ್ಲಿ ಇವರು ಯಾರ ಹೆಸರನ್ನು ಹೇಳಿಲ್ಲ ಯಾಕೆ? ಎಂದು ಕಾಂಗ್ರೆಸ್ ಮುಖಂಡರಿಗೆ ನೇರ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದವರು ಸುಮ್ಮನೆ ತಮ್ಮ ರಾಜಕೀಯ ಲಾಭಕ್ಕಾಗಿ ಲಿಂಗಾಯತರನ್ನು ಪ್ರತ್ಯೇಕಿಸುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತರ ಬಗ್ಗೆ ಹೃದಯಪೂರ್ವಕ ಗೌರವ ಇಲ್ಲವೇ ಇಲ್ಲ. ಚುನಾವಣೆ ಬಂದಾಗ ಮಾತ್ರ ಅವರ ಲಿಂಗಾಯತ ಪ್ರೀತಿ ಎದ್ದು ಕಾಣಿಸುತ್ತದೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಲಿಂಗಾಯತರನ್ನು ಮೊದಲು ಒಗ್ಗೂಡಿಸಿದ ಕೀರ್ತಿ ವೀರೇಂದ್ರ ಪಾಟೀಲ ಅವರಿಗೆ ಸಲ್ಲುತ್ತದೆ. ಅದಾದ ಬಳಿಕ ಛಿದ್ರವಾಗಿದ್ದ ಲಿಂಗಾಯತರನ್ನು ಒಂದು ಮಾಡಿದ್ದು ಬಿ.ಎಸ್. ಯಡಿಯೂರಪ್ಪ. ಈಗ ಕಾಂಗ್ರೆಸ್ ಪಕ್ಷದವರು ರಾಜಕೀಯ ದುರುದ್ದೇಶದಿಂದ ವೀರಶೈವರು ಬೇರೆ, ಲಿಂಗಾಯತರು ಬೇರೆ. ಈ ಥರ, ಆ ಥರ ಎಂದು ಜಗದೀಶ್ ಶೆಟ್ಟರ್ ಹಾಗೂ ಮತ್ತಿತರರನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ಎಂದು ಭವಿಷ್ಯ ನುಡಿದರು.
ಲಿಂಗಾಯತರ ಬಗ್ಗೆ ಬಿ.ಎಲ್. ಸಂತೋಷ್ ಟೀಕೆ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿರಾಣಿ, ಅವರು ಅಷ್ಟು ಸಣ್ಣವರಲ್ಲ. ಬಿ.ಎಲ್. ಸಂತೋಷ್ ಹಾಗೂ ಪ್ರಲ್ಹಾದ್ ಜೋಶಿ ಅವರು ಹಾಗೆ ಹೇಳಿಯೇ ಇಲ್ಲ. ಈ ಅಪಪ್ರಚಾರ ಮಾಡಲು ಅವರ ಹೆಸರಿನಲ್ಲಿ ಬರೆದವರು ಸಿಕ್ಕುಬಿದ್ದಿದ್ದಾರೆ. ಇಂಥ ಎಲ್ಲ ತಪ್ಪು ಸಂದೇಶಗಳನ್ನು ಹಬ್ಬಿಸಿಯೇ ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದವರು ಲಿಂಗಾಯತರಿಗೆ ಮೂಗಿಗೆ ತುಪ್ಪ ಹಚ್ಚಿ ಭರವಸೆ ನೀಡಿ, ಹೆಚ್ಚು ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಬಿಜೆಪಿಯನ್ನು ಮತ್ತೆ ತಳಮಟ್ಟದಿಂದ ಕಟ್ಟುತ್ತೇವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.