ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಲಿ

12Snk1
Published on

ಸಂಕೇಶ್ವರ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಶಾಲಾ-ಕಾಲೇಜು ಮಟ್ಟದಲ್ಲಿ ಗುರುತಿಸಿ ಬೆಳೆಸಿದ್ದೆ ಆದಲ್ಲಿ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ನಿಡಸೋಸಿ ಎಸ್‌ಎನ್‌ಜೆಪಿಎನ್‌ಎಂಎಸ್ ಟ್ರಸ್ಟ್‌ನ ಬಿಸಿಎ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಪ್ರತಿಭಾ ಶೋಧ ಆಹ್ವಾನ 1.0 ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಅವಕಾಶ ಸದುಪಯೋಗಪಡೆದುಕೊಂಡು ಯಶಸ್ಸಿನ ಪಥದಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆ, ಸಂಶೋಧನೆ, ನವೀನ ಆಲೋಚನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು. ಎಸ್‌ಎನ್‌ಜೆಪಿಎನ್‌ಎಂಎಸ್ ಟ್ರಸ್ಟ್ ಸೂಕ್ತ ವಾತಾವರಣ ಕಲ್ಪಿಸುತ್ತಿರುವುದು ಅಭಿನಂದನಾರ್ಹ ಎಂದರು. ರಸಪ್ರಶ್ನೆ, ಪೋಸ್ಟರ್ ಪ್ರಸ್ತುತಿ, ಗಾಯನ, ಸಮೂಹ ನೃತ್ಯ, ರೀಲ್ಸ್ ಮಾಡುವುದು, ಚರ್ಚೆ, ಮಾನಸಿಕ ಸಾಮರ್ಥ್ಯ ಪರೀಕ್ಷೆ, ಛಾಯಾಚಿತ್ರ, ರಂಗೋಲಿ, ಮೂಕಾಭಿನಯ ವಿಷಯಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿವಿಧ ತಾಲೂಕಿನ 21 ಪದವಿಪೂರ್ವ ಮಹಾವಿದ್ಯಾಲಯಗಳ 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಸಂಸ್ಥೆ ಕಾರ್ಯದರ್ಶಿ ಎಸ್.ಬಿ.ಬೆಲ್ಲದ, ಶೈಕ್ಷಣಿಕ ಸಲಹೆಗಾರ ಡಾ.ಎಂ.ಬಿ.ಕೋಥಳಿ, ಪ್ರಾಚಾರ್ಯ ಬಸವರಾಜ ಹಾಲಬಾವಿ, ಡಾ.ಎಸ್.ವಿ.ಕಂಬಾರ, ಪ್ರೊ.ಮಹಾಂತೇಶ ಪಾಟೀಲ, ಪ್ರೊ.ಶಿಲ್ಪಾ ಪಾಟೀಲ, ಪ್ರೊ.ಅಕ್ಷಯಕುಮಾರ ಪಾಟೀಲ, ಪ್ರೊ.ಅಕ್ಷತಾ ಹಿರೇಮಠ, ಸಂಪದಾ ಶೆಂಡೆ, ಸೃಷ್ಟಿ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net