

ಕುಮಟಾ: ಉಚಿತ ಮತ್ತು ಸಬ್ಸಿಡಿ ಯೋಜನೆಗಳನ್ನು ನೀಡುವಾಗ ಸರ್ಕಾರಕ್ಕೆ ಸಮರ್ಪಕ ಮಾನದಂಡ ಇಲ್ಲ. ಹೀಗಾಗಿ, ರಾಜ್ಯದಲ್ಲಿ ಬಾಡಿಗೆ ವಾಹನ ಚಾಲಕರು ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪಕ್ಷಾತೀತವಾಗಿ ಸಂಘಟಿತ ಹೋರಾಟ ಮಾಡಬೇಕಿದೆ ಎಂದು ಜಿಲ್ಲಾ ಆಟೋ ಯೂನಿಯನ್ ಅಧ್ಯಕ್ಷ ಆರ್.ಜಿ. ನಾಯ್ಕ ಹೇಳಿದರು.
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಕುಮಟಾ ಹಾಗೂ ಹೊನ್ನಾವರದ ಬಾಡಿಗೆ ವಾಹನ ಚಾಲಕ-ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಟ್ಯಾಕ್ಸಿ, ಟೆಂಪೋ, ರಿಕ್ಷಾ ಇನ್ನಿತರ ಬಾಡಿಗೆ ವಾಹನದವರ ಪರಿಸ್ಥಿತಿ ಶೋಚನೀಯವಾಗಿದ್ದು, ಬಾಡಿಗೆ ವಾಹನಗಳ ಚಾಲಕರಿಗೆ ಸರ್ಕಾರ ಬರೆ ಎಳೆದಂತಾಗಿದೆ. ಎಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸಂಘಟನೆ ಕರೆ ನೀಡಿರುವಂತೆ ಜು. 27ರಂದು ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿ ಬಳಿ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಬೇಕಿದೆ ಎಂದರು.
ಹೊನ್ನಾವರ ಟ್ಯಾಕ್ಸಿ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಶ್ರೀಕಾಂತ ಮೇಸ್ತ ಮಾತನಾಡಿ, ಹತ್ತಾರು ಸಮಸ್ಯೆಗಳ ನಡುವೆ ಜೀವನ ನಿರ್ವಹಣೆಗಾಗಿ ಪರದಾಡುತ್ತಿರುವ ಸಂಘಟನೆ ಸದಸ್ಯರ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸೋಣ ಎಂದರು.
ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘಟನೆ (ಕೆಟಿಡಿಒ) ಜಿಲ್ಲಾಧ್ಯಕ್ಷ ನವೀನ ನಾಯ್ಕ, ಪ್ರತಿಭಟನೆಯ ದಿನ ವಿದ್ಯಾರ್ಥಿಗಳನ್ನು ಸಾಗಿಸುವ ವಾಹನಗಳಿಗೆ ಮತ್ತು ಆಂಬುಲೆನ್ಸ್‌ಗಳಿಗೆ ವಿನಾಯಿತಿ ನೀಡಲಾಗಿದ್ದು, ಉಳಿದ ಎಲ್ಲ ಬಾಡಿಗೆ ವಾಹನಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕುಮಟಾ-ಹೊನ್ನಾವರ ಟೆಂಪೋ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಸಂತೋಷ ನಾಯ್ಕ, ಕುಮಟಾ-ಅಘನಾಶಿನಿ ಮಾರ್ಗದ ಟೆಂಪೋ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಸೋಮನಾಥ ಗೌಡ, ಕರವೇ ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷ ರಾಜು ನಾಯ್ಕ ಮಾಸ್ತಿಹಳ್ಳ ಮಾತನಾಡಿದರು. ಕುಮಟಾ ಹಾಗೂ ಹೊನ್ನಾವರ ತಾಲೂಕಿನ ರಿಕ್ಷಾ, ಟೆಂಪೋ, ಓಮಿನಿ, ಕಾರು, ಇತರ ಬಾಡಿಗೆ ವಾಹನಗಳ ಚಾಲಕರು, ಮಾಲೀಕರು ಪಾಲ್ಗೊಂಡಿದ್ದರು.
ಸರ್ಕಾರಗಳು ಎಲ್ಲ ವರ್ಗದವರಿಗೂ ಉಚಿತ ಯೋಜನೆ, ಸಬ್ಸಿಡಿ ಸೌಲಭ್ಯ ಕೊಡುತ್ತವೆ. ಆದರೆ, ಬಾಡಿಗೆ ವಾಹನ ಚಾಲಕರಿಗೆ ಯಾವ ಸುರಕ್ಷೆಯೂ ಇಲ್ಲ. ಸದನದಲ್ಲಿ ಚಾಲಕರ ಪರವಾಗಿ ಯರೂ ಮಾತನಾಡುವವರಿಲ್ಲ. ವೇತನ ಆಯೋಗಗಳ ಮುಂದೆ ಚಾಲಕರ ನಿಯೋಗವಿಲ್ಲ. ಚಾಲಕರ ಮಕ್ಕಳಿಗೆ ಉಚಿತ ಶಿಕ್ಷಣವನ್ನಾದರೂ ನೀಡಲಿ, ವಿಮೆ-ತೆರಿಗೆ ವಿನಾಯಿತಿ, ಇಂಧನ ಸಬ್ಸಿಡಿ ನೀಡಲಿ. ಆರ್. ಜಿ. ನಾಯ್ಕ, ಜಿಲ್ಲಾ ಆಟೋ ಯೂನಿಯನ್ ಅಧ್ಯಕ್ಷ