

ಬ್ಯಾಡಗಿ: ಗ್ರಾಮಸ್ಥರು ಸಹಕಾರದಿಂದ ಜೀವನ ನಡೆಸುವ ಮೂಲಕ ಬೇರೆ ಗ್ರಾಮಕ್ಕೆ ಮಾದರಿಯಾಗಬೇಕು. ಎಲ್ಲ ಸಮಾಜಗಳ ಜನರು ಒಂದಾಗಿ ಸಾಮರಸ್ಯ ಭಾವನೆ ಬೆಳೆಸಿಕೊಂಡು ಸಹಕಾರ ತತ್ವದಡಿ ಬಾಳಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಬಡಮಲ್ಲಿ ಗ್ರಾಮದಲ್ಲಿ ಪಾಂಡುರಂಗ ರುಕ್ಮೀಣಿ ದೇವಸ್ಥಾನ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚುನಾವಣೆ ಪ್ರಚಾರ ವೇಳೆ ಗ್ರಾಮದ ಹಿರಿಯರು ದೇವಸ್ಥಾನ ನಿರ್ವಿುಸಲು ಅನುದಾನ ಬೇಡಿಕೆಯಿಟ್ಟಿದ್ದರು. ಆಗ ನಾನು ಕೊಟ್ಟ ಭರವಸೆಯಂತೆ ಪಾಂಡುರಂಗ ರುಕ್ಮೀಣಿ ದೇವಸ್ಥಾನ ನಿರ್ವಣಕ್ಕೆ ಚಾಲನೆ ನೀಡಲಾಗಿದೆ. ಪಾಂಡುರಂಗ ದೇವಸ್ಥಾನಕ್ಕೂ 15 ಲಕ್ಷ ರೂ. ಹೆಚ್ಚುವರಿ ಅನುದಾನ ನೀಡಲಾಗುವುದು. ಹಿಂದಿನ ಅವಧಿಯಲ್ಲಿ ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ 15 ಲಕ್ಷ ರೂ. ಹಾಗೂ ಸಿದ್ದರಾಮೇಶ್ವರ ದೇವಸ್ಥಾನಕ್ಕೆ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.
ತಾಲೂಕಿನ ಮಲೆನಾಡು ಪ್ರದೇಶದ ಕಾಗಿನೆಲೆ, ಚಿಕ್ಕಬಾಸೂರು ಸೇರಿದಂತೆ ಈ ಗ್ರಾಮಗಳಿಗೆ ಗುಡ್ಡದಮಲ್ಲಾಪುರ ನೀರಾವರಿ ಯೋಜನೆ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಚಿಕ್ಕಬಾಸೂರು ಕುಡಿಯುವ ನೀರು ಯೋಜನೆ ಜಾರಿಯಿದೆ. ಕಾಗಿನೆಲೆ ಕೆರೆ ತುಂಬಿಸಲು ಪೈಪ್ಲೈನ್ ಯೋಜನೆ ಪೂರ್ಣಗೊಂಡಿದೆ. ಎಲ್ಲ ರಸ್ತೆಗಳಿಗೆ ಡಾಂಬರೀಕರಣ ಮಾಡಿಸಲಾಗಿದ್ದು, ಉಳಿದ ರಸ್ತೆಗಳನ್ನು ಹಂತಹಂತವಾಗಿ ಕೈಗೊಳ್ಳಲಾಗುವುದು. ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯುವಂತೆ ಯೋಜನೆ ರೂಪಿಸಿದೆ ಎಂದರು.
ಪಾಂಡುರಂಗ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಮೇವುಂಡಿ, ಕೆಸಿಸಿ ಬ್ಯಾಂಕ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಶಿವನಗೌಡ್ರ ವೀರನಗೌಡ್ರ, ಬಸನಗೌಡ್ರ ಸಣ್ಣಗೌಡ್ರ, ನಾಗರಾಜ ಆನ್ವೇರಿ, ಗದಿಗೆಪ್ಪಗೌಡ್ರ ಹೊಂಡದಗೌಡ್ರ, ನಾಗಪ್ಪ ಓಲೇಕಾರ, ಬಸಪ್ಪ ಗೊಂದಿ ಇತರರಿದ್ದರು.