

ಕುಮಟಾ: ಪಹಲ್ಗಾಮ್ ಉಗ್ರ ದಾಳಿ ಪಾಕಿಸ್ತಾನದ ಐಎಸ್ಐ ಪ್ರಾಯೋಜಿತ ಎಂಬುದು ಜಗಜ್ಜಾಹೀರಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಅಕ್ರಮವಾಗಿರುವ ಹಾಗೂ ವೀಸಾ ಅವಧಿ ಮುಗಿದಿರುವ ಪಾಕಿಸ್ತಾನಿಯರು, ನುಸುಳುಕೋರರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಮೇ 6ರಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಜೆಪಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಳಿಕ ರಾಜ್ಯಪಾಲರಿಗೆ ಸಂಬೋಧಿಸಿದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ತಿಳಿಸಿದರು.
ಪಕ್ಷದ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ರಾಜ್ಯದಲ್ಲಿ ಕೇಂದ್ರದ ಆದೇಶವಿದ್ದರೂ ವೀಸಾ ಅವಧಿ ಮುಗಿದ ಹಾಗೂ ಅಕ್ರಮವಾಗಿರುವ ಪಾಕಿಸ್ತಾನಿಯರ ಗಡಿಪಾರಿಗೆ ಮೀನಮೇಷ ಎಣಿಸುತ್ತಿದೆ. ನಮ್ಮ ಜಿಲ್ಲೆಯಲ್ಲೂ 10ಕ್ಕೂ ಹೆಚ್ಚು ಅವಕಾಶ ಮುಗಿದ ಪಾಕಿಸ್ತಾನಿಯರು ಇದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಯೇ ಬಹಿರಂಗ ಪಡಿಸಿದೆ. ಆದ್ದರಿಂದ ರಾಜ್ಯದಲ್ಲಿರುವ ಪಾಕಿಸ್ತಾನಿಯರ ಗಡಿಪಾರು ಮಾಡಲೇಬೇಕು ಎಂಬ ಒತ್ತಾಯವನ್ನು ಮನವಿ ಮೂಲಕ ರಾಜ್ಯಪಾಲರ ಮುಂದಿಡಲಾಗುವುದು. ಜಿಲ್ಲೆಯ ಹೆಚ್ಚಿನ ಸಂಖ್ಯೆಯ ನಾಗರಿಕರು ಪಾಲ್ಗೊಳ್ಳಬೇಕು ಎಂದು ವಿನಂತಿ ಮಾಡುತ್ತೇವೆ ಎಂದರು.
ಪಾಕಿಸ್ತಾನಿಯರ ಗಡಿಪಾರು ಸಂಬಂಧಿಸಿ ಸಹಿ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಎಲ್ಲಕ್ಕಿಂತ ದೇಶಮುಖ್ಯ ಎಂಬುದು ಬಿಜೆಪಿ ಸಿದ್ಧಾಂತ, ಆದರೆ, ರಾಜ್ಯದಲ್ಲಿ ಕಾಂಗ್ರೆಸ್ಗೆ ಪಕ್ಷ ಮತ್ತು ಅಧಿಕಾರವೇ ಮುಖ್ಯವಾಗಿದೆ. ಇಷ್ಟೊತ್ತಿಗಾಗಲೇ ರಾಜ್ಯದಲ್ಲಿ ಅಕ್ರಮವಾಗಿ ಇರುವ ಪಾಕಿಸ್ತಾನಿಯರನ್ನು, ನುಸುಳುಕೋರರನ್ನು, ವೀಸಾ ಅವಧಿ ಮುಗಿದವರನ್ನು ವಾಪಸ್ ಅವರ ದೇಶಕ್ಕೆ ಕಳುಹಿಸಬೇಕಿತ್ತು. ಪಹಲ್ಗಾಮ್ ಘಟನೆಯ ಬಳಿಕ ದಿಟ್ಟ ಕ್ರಮ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಜತೆ ಕೈಜೋಡಿಸಬೇಕಿತ್ತು. ಆದರೆ, ದೇಶದ ವಿಚಾರ ಬಂದಾಗಲೂ ರಾಜ್ಯ ಸರ್ಕಾರಕ್ಕೆ ತುಷ್ಟೀಕರಣವೇ ಮುಖ್ಯವಾಗಿದೆ. ಮಂಗಳೂರಿನಲ್ಲಿ ಸುಹಾಸ ಶೆಟ್ಟಿ ಹತ್ಯೆಗೆ ರಾಜ್ಯ ಸರ್ಕಾರದ ಪ್ರಮುಖರ ಕಡೆಯಿಂದ ಗೊಂದಲಕಾರಿ ಹೇಳಿಕೆಗಳು ಬಂದಿವೆ. ರಾಜ್ಯದಲ್ಲಿ ಹಿಂದುಗಳಿಗೆ ಬದುಕುವ ಗ್ಯಾರಂಟಿ ಇಲ್ಲದಂತಾಗಿದೆ. ಸರ್ಕಾರ ತಾನಾಗಿಯೇ ಕ್ರಮ ಕೈಗೊಳ್ಳಬೇಕು. ಜನ ರೊಚ್ಚಿಗೆದ್ದು ಹೋರಾಡುವುದಕ್ಕೆ ಅವಕಾಶ ಕೊಡಬಾರದು. ಪಾಕಿಸ್ತಾನಿಯರ ಗಡಿಪಾರಿಗೂ ಇಂದು ಹೋರಾಡಲು ಬನ್ನಿ ಎಂದು ವಿನಂತಿಸುವ ಇಂದಿನ ಪರಿಸ್ಥಿತಿಗೆ ಬೇಸರವಾಗುತ್ತದೆ. ಪಕ್ಷಭೇದ ಬಿಟ್ಟು ಎಲ್ಲರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ವೆಂಕಟೇಶ ನಾಯಕ, ಪದಾಧಿಕಾರಿಗಳಾದ ಎಂ.ಜಿ. ಭಟ್, ಪ್ರಶಾಂತ ನಾಯ್ಕ, ಗಣೇಶ ಪಂಡಿತ, ತಿಮ್ಮಪ್ಪ ಮುಕ್ರಿ, ಹೇಮಂತಕುಮಾರ, ಲಕ್ಷ್ಮಣ ಇತರರಿದ್ದರು.