

ಶಿರಹಟ್ಟಿ: ಪರಿಸರದ ಬಗ್ಗೆ ಪ್ರೀತಿ, ಅಭಿಮಾನಗಳನ್ನು ಮಕ್ಕಳಲ್ಲಿ ಶಾಲಾ ಹಂತದಲ್ಲಿ ಬೆಳಸಬೇಕು. ಪ್ರತಿ ಮಗುವಿನಲ್ಲಿ ನಾಗರಿಕ ಪ್ರಜ್ಞೆ ಮೂಡಿಸಬೇಕು ಎಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಮೇಘನಾ ಎಚ್., ಹೇಳಿದರು.
ಪಟ್ಟಣದ ಎಫ್‌ಎಂ ಡಬಾಲಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪರಿಸರ ಉಳಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ನಿಷೇಧಿತ ಪ್ಲಾಸ್ಟಿಕ್ ಉಪಯೋಗಿಸದಂತೆ ಜನಜಾಗೃತಿ ಕಾರ್ಯ ಮಾಡಬೇಕು. ಮಣ್ಣು, ನೀರು, ಗಾಳಿ ಮತ್ತು ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯ ಆಗದಂತೆ ಎಚ್ಚರಿಕೆ ವಹಿಸಬೇಕು. ಪ್ರತಿ ಮನೆಯಲ್ಲಿ ಜರುಗುವ ಹಬ್ಬ, ಜನ್ಮದಿನ, ಕುಟುಂಬ ಕಾರ್ಯಕ್ರಮಗಳಂದು ಒಂದು ಸಸಿ ನೆಡಬೇಕು ಎಂದರು.
ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಾಚಾರ್ಯ ಎಂ.ಸಿ. ಭಜಂತ್ರಿ ಸ್ವಾಗತಿಸಿದರು. ಮುಖ್ಯ ಗುರು ಆರ್.ಎಫ್. ಬಟಗುರುಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಚ್. ಶಿಗ್ಗಿ ನಿರೂಪಿಸಿದರು. ಎನ್. ಹಣಮರೆಡ್ಡಿ ವಂದಿಸಿದರು. ಎನ್.ಆರ್. ಯಡಚಗೊಂಡರು, ಎಫ್.ಎ. ಬಾಬುಖಾನ, ಕೆ.ವಿ. ಗೌಡ್ರ, ಸುನೀಲ್ ಲಮಾಣಿ, ಟಿ, ಎಸ್. ಲಮಾಣಿ ಇತರರಿದ್ದರು.