

ಹುಬ್ಬಳ್ಳಿ : ಸಾಹಿತಿ ಬಾನು ಮುಷ್ತಾಕ್ ಅವರು ಮಡಿ ಸೀರೆ ಉಟ್ಟು, ಹೂವು ಮುಡಿದು, ಹಣೆಗೆ ಅರಿಷಿಣ, ಕುಂಕುಮ ಹಚ್ಚಿಕೊಂಡು ಮೈಸೂರು ದಸರಾ ಉದ್ಘಾಟಿಸಲಿ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ರಾಣಿ ಚನ್ಮಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ ಮೂರು ದಿನಗಳ ಶ್ರೀ ಕೃಷ್ಣ ರೂಪಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗುವ ಹಿಂದುಗಳಿಗೆ ಟೋಪಿ ತೊಡಿಸಲಾಗುತ್ತದೆ. ಅದೇ ರೀತಿ, ಬಾನು ಮುಷ್ತಾಕ್ ಅವರೂ ಹಿಂದು ಸಂಪ್ರದಾಯದಡಿ ಮೈಸೂರು ದಸರಾ ಉದ್ಘಾಟಿಸಲಿ ಎಂದು ಸವಾಲು ಹಾಕಿದರು.
ಕನ್ನಡಾಂಬೆಗೆ ಭುವನೇಶ್ವರಿ ಹೆಸರಿಟ್ಟು, ಅರಿಷಿಣಕುಂಕುಮ ತೊಡಿಸಿದರೆ ಮುಸ್ಲಿಮರು ಎಲ್ಲಿ ಹೋಗಬೇಕೆಂದು ಈ ಹಿಂದೆ ಬಾನು ಮುಷ್ತಾಕ್ ಅವರು ಪ್ರಶ್ನಿಸಿದ್ದರು. ಕನ್ನಡಾಂಬೆ ಕನ್ನಡಿಗರ ಹೆಮ್ಮೆ. ಹಿಂದುಗಳೆಲ್ಲ ನದಿಗಳನ್ನು ದೇವತೆಯಂತೆ ಪೂಜಿಸುತ್ತೇವೆ. ಇದೀಗ, ಅವರು ಕನ್ನಡಾಂಬೆ, ಚಾಮುಂಡೇಶ್ವರಿಯೇ ನನ್ನನ್ನು ದಸರಾ ಉದ್ಘಾಟನೆಗೆ ಕರೆಯಿಸಿಕೊಂಡಿದ್ದಾರೆಂದು ಹೇಳುತ್ತಿದ್ದಾರೆ. ಬಾನು ಮುಷ್ತಾಕ್ ಅವರೇನು ಸಾಹಿತಿಯೋ ಅಥವಾ ನಾಟಕಕಾರರೋ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ನಿಮ್ಮ ಧರ್ಮದಲ್ಲಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡುತ್ತಾರೆ. ಆದರೆ, ಹಿಂದುಗಳಲ್ಲಿ ಹೆಣ್ಣು ಎಂದರೆ ದೇವತೆಯ ಸ್ವರೂಪಿ. ನಮ್ಮ ಧರ್ಮದ ಆಚರಣೆ ಬಗ್ಗೆ ಅಸಭ್ಯವಾಗಿ ಮಾತನಾಡುವ ನೀವು ದಸರಾ ಉದ್ಘಾಟನೆಗೆ ಸ್ವಯಂಪ್ರೇರಿತವಾಗಿ ನಿರಾಕರಿಸಬೇಕಿತ್ತು’ ಎಂದರು.
ಒಗ್ಗೂಡಬೇಕು: ಧರ್ಮಸ್ಥಳದ ಬಗ್ಗೆ ಸುಳ್ಳು ವಿಷಯಗಳನ್ನಿಟ್ಟುಕೊಂಡು ಕೆಟ್ಟದ್ದಾಗಿ ವಿಡಿಯೋ ಮಾಡಿರುವ ಸಮೀರ ಎಂಬಾತ, ತಮ್ಮ ಮದರಾಸಗಳಲ್ಲಿ ಲೈಂಗಿಕ ದೌರ್ಜನ್ಯ ನಡೆಯುವ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರತಾಪಸಿಂಹ ಪ್ರಶ್ನಿಸಿದರು.
ಹಿಂದುಗಳು ಒಗ್ಗಟ್ಟಾಗಿರದಿದ್ದರೆ ನಮ್ಮ ಧಾರ್ವಿುಕ ಕೇಂದ್ರಗಳ ಮೇಲೆ ಈ ರೀತಿಯ ದೌರ್ಜನ್ಯ, ಅನ್ಯಾಯ, ದಾಳಿಗಳು ನಡೆಯುತ್ತಲೇ ಇರುತ್ತವೆ. ನಾನು ಲಿಂಗಾಯತ, ಗೌಡ, ಪರಿಶಿಷ್ಟ ಎಂಬ ಭೇದಗಳನ್ನು ಮರೆತು, ನಾವೆಲ್ಲ ಹಿಂದುಗಳೆಂಬ ಭಾವನೆಯಲ್ಲಿ ನಾವೆಲ್ಲ ಒಗ್ಗೂಡಬೇಕು. ಆಗ, ದುಷ್ಟ ಶಕ್ತಿಗಳು ನಮ್ಮ ಧಾರ್ವಿುಕ ಕೇಂದ್ರಗಳತ್ತ ಕಣ್ಣು ಹಾಕುವುದಿಲ್ಲ ಎಂದರು.
ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಚಾಮುಂಡಿ ಬೆಟ್ಟ ಎಲ್ಲರಿಗೂ ಸೇರಿದ್ದು ಎನ್ನುತ್ತಾರೆ. ಇಂತಹ ಮಾತುಗಳಿಗೆ ನಾವು ಹೆದರುವುದಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ಗೆ ಮತ ಹಾಕಿದರೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೆಂದು ಹಿಂದೆಯೇ ಹೇಳಿದ್ದೆ. ಈಗ ರಾಜ್ಯದಲ್ಲಿ ಅದೇ ರೀತಿಯ ಸರ್ಕಾರ ಇದೆ. ಗಣೇಶೋತ್ಸವ, ಹನುಮಾನ ಜಯಂತಿಗಳಿಗೆ ಡಿಜೆ ನಿಷೇಧಿಸುವ ಮೂಲಕ ಹಿಂದು ವಿರೋಧಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ, ಮಹಾಪೌರ ಜ್ಯೋತಿ ಪಾಟೀಲ, ಉಪ ಮಹಾಪೌರ ಸಂತೊಷ ಚವ್ಹಾಣ, ಸಂಜೀವ ಬಡಸ್ಕರ, ಡಾ. ವಿ.ಎಸ್.ವಿ. ಪ್ರಸಾದ ಹಾಗೂ ಇತರರು ಇದ್ದರು.