

ಹುಬ್ಬಳ್ಳಿ : ಕಾರ್ಗಿಲ್ ವಿಜಯ. ಇದನ್ನು ಕೇಳಿದರೆ ಸಾಕು ಪ್ರತಿಯೊಬ್ಬ ಭಾರತೀಯರಲ್ಲಿ ದೇಶಭಕ್ತಿ ಉಕ್ಕುತ್ತದೆ. ಭಾರತದ ಮೇಲೆ ದಾಳಿ ಮಾಡಿದ ಪಾಕಿ ಸೈನಿಕರನ್ನು ನಮ್ಮ ನೆಲದಿಂದ ಓಡಿಸಿ ವಿಜಯ ಪತಾಕೆ ಹಾರಿಸಿದ ದಿನವೇ ಕಾರ್ಗಿಲ್ ವಿಜಯ ದಿವಸ್. ಶಾಂತಿಗೆ ಬದ್ಧ, ಆದರೆ, ನಮ್ಮ ದೇಶ ರಕ್ಷಣೆಗೆ ಸದಾ ಸನ್ನದ್ಧ ಎನ್ನುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ ಸೈನಿಕರ ದಿಟ್ಟ ಹೋರಾಟವನ್ನು ಸ್ಮರಿಸುವ ದಿನ ಮತ್ತೊಮ್ಮೆ ಬಂದಿದೆ.
ಕಾರ್ಗಿಲ್ ಹೋರಾಟದಲ್ಲಿ ವೀರಮರಣವನ್ನಪ್ಪಿದ ನಮ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಾಗೂ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರ ಕೆಚ್ಚೆದೆಯ ಹೋರಾಟವನ್ನು ಸ್ಮರಿಸುವ ಉದ್ದೇಶದಿಂದ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಜುಲೈ 28ರಂದು ಸಂಜೆ 4 ಗಂಟೆಗೆ ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕಾಲೇಜ್ ಎದುರಿನ ಶ್ರೀ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ‘ಕಾರ್ಗಿಲ್ ವಿಜಯ ದಿವಸ್ ರಜತ ಮಹೋತ್ಸವ ಸಂಭ್ರಮ’ ಆಯೋಜಿಸಿದೆ.
ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಧಾರವಾಡ ಜಿಲ್ಲೆಯ ಯೋಧರಿಗೆ ಆತ್ಮೀಯ ಸನ್ಮಾನ ಏರ್ಪಡಿಸಲಾಗಿದೆ. ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಜನರಲ್ಲಿ ರಾಷ್ಟ್ರಭಕ್ತಿಯ ಉತ್ಸಾಹ ಇಮ್ಮಡಿಗೊಳಿಸುವ ಕೊಲ್ಲಾಪುರದ ಸುಪ್ರಸಿದ್ಧ ಸ್ವರ ನಿನಾದ ತಂಡ ಜಾಗೋ ಹಿಂದುಸ್ತಾನಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಸಂಸದ ಪ್ರಲ್ಹಾದ ಜೋಶಿ ಅವರ ಉಪಸ್ಥಿತಿಯಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮಕ್ಕೆ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಪ್ರಸಾದ ಅಬ್ಬಯ್ಯ ಅತಿಥಿಗಳಾಗಿ ಆಗಮಿಸುವರು. ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ಎಂಡಿ ಸಿಎಚ್ ವಿಎಸ್ವಿ ಪ್ರಸಾದ ಅವರು ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮದ ಟ್ರಾವೆಲ್ ಪಾರ್ಟನರ್ ವಿಜಯಾನಂದ ಟ್ರಾವೆಲ್ಸ್ ಹಾಗೂ ರೆಡ್ ಎಫ್ಎಂ ರೇಡಿಯೋ ಪಾರ್ಟನರ್ ಆಗಿದೆ.
ರಾಷ್ಟ್ರದ ಗೌರವಕ್ಕಾಗಿ ವೀರಮರಣವನ್ನಪ್ಪಿದ ನೂರಾರು ಯೋಧರನ್ನು ಸ್ಮರಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಒದಗಿಸಲಾಗಿದೆ. ಭವ್ಯಭಾರತದ ಯುವಕ, ಯುವತಿಯರು, ವಿದ್ಯಾರ್ಥಿಗಳು, ಸಾರ್ವಜನಿಕರು, ಗೃಹಿಣಿಯರು ತಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ.
ಮಾಹಿತಿಗೆ 88844 32301 ಅಥವಾ 88844 32341 ಸಂರ್ಪಸಿ.
===============