

ಸವಣೂರ: ಪಟ್ಟಣದಲ್ಲಿ ಜ. 28ರಂದು ಏರ್ಪಡಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಮನೋರಂಜನೆಗೆ ಸಿಮೀತಗೊಳಿಸುವ ಬದಲಾಗಿ ಕನ್ನಡ ಭಾಷೆ ಉಳಿವಿಗಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತಾಗಬೇಕು ಎಂದು ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಲಲಾಟೇಶ್ವರ ಕಲ್ಮಠದಲ್ಲಿ ಗುರುವಾರ ಏರ್ಪಡಿಸಿದ್ದ ಸವಣೂರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು. ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರಭು ಅರಗೋಳ ನೇತೃತ್ವ ವಹಿಸಿ ಮಾತನಾಡಿ, ಈಗಾಗಲೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಿದ್ಧತೆ ಕೈಗೊಳ್ಳಲಾಗಿದೆ. ಶಿಕ್ಷಕರು, ಸರ್ಕಾರಿ ನೌಕರರು, ವಿವಿಧ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಸೇರಿ ಸರ್ವರು ಹೆಚ್ಚಿನ ಆಸಕ್ತಿಯಿಂದ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಯೋಗಿ ಆಲದಕಟ್ಟಿ ಮಾತನಾಡಿ, ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು. ಸಮ್ಮೇಳನ ಅಧ್ಯಕ್ಷ ಮಲ್ಲಾರಪ್ಪ ತಳ್ಳಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಕಾರ್ಯಾಧ್ಯಕ್ಷ ರಮೇಶ ಅರಗೋಳ, ಉಪಾಧ್ಯಕ್ಷರಾದ ಎಂ.ಜೆ. ಮುಲ್ಲಾ, ಮೋದಿನ ಹಣಗಿ, ಕೋಶಾಧ್ಯಕ್ಷ ಸುಭಾಸ ಮಜ್ಜಗಿ, ಪದಾಧಿಕಾರಿಗಳಾದ ಪ್ರವೀಣ ಚರಂತಿಮಠ, ಡಾ. ಗುರುಮಹಾಂತಯ್ಯ ಆರಾಧ್ಯಮಠ, ಉಮೇಶ ದಾಮೋದರ, ಶ್ರೀನಿವಾಸ ಖಾರದ, ಪರಶುರಾಮ ಈಳಗೇರ, ಬಸನಗೌಡ ಪಾಟೀಲ, ರವಿ ಕರಿಗಾರ, ರೇಖಾ ಕಣೇಕಲ್, ಸುನಂದಾ ಚಿನ್ನಾಪೂರ, ಇತರರಿದ್ದರು.