

ಮಾನ್ವಿ: ಮೈಕ್ರೋ ಫೈನಾನ್ಸ್ ಸಂಸ್ಥೆಯ ಏಜೆಂಟರು ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಮಾಜ ಸೇವಕರ ವೇದಿಕೆ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಲಾಯಿತು.
ಮುಸ್ಲಿಂ ಸಮಾಜದ ಧರ್ಮಗುರು ಸೈಯದ್ ಖಾಲೀದ್ ಖಾದ್ರಿ ಸಾಹೇಬ್ ಮಾತನಾಡಿ, ತಾಲೂಕಿನಲ್ಲಿ 22ಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳಿಂದ ಮಹಿಳಾ ಗುಂಪುಗಳಿಗೆ ಆರ್ಥಿಕ ನೆರವು ನೀಡಿದ್ದು, ಸಂಸ್ಥೆಯವರು ಬಡ್ಡಿ ಹಾಗೂ ಅಸಲನ್ನು ವಾರ, 15 ದಿನ, ತಿಂಗಳಿಗೊಮ್ಮೆ ಕಂತುಗಳ ರೂಪದಲ್ಲಿ ಸದಸ್ಯರಿಂದ ಸಾಲ ಮರುಪಾವತಿ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ವ್ಯಾಪಾರದಲ್ಲಿ ನಷ್ಟವಾಗಿದ್ದು ಮರುಪಾವತಿಸಲು ಕಷ್ಟವಾಗುತ್ತಿದೆ. ಸಾಲ ಮರುಪಾವತಿಗೆ 6 ತಿಂಗಳ ಬಡ್ಡಿ ರಹಿತ ಕಾಲಾವಕಾಶ ನೀಡಬೇಕು. ಕಾನೂನು ಬಾಹಿರವಾಗಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಸುಭಾನ್ ಬೇಗ್, ಜೀಶಾನ್ ಅಖಿಲ್, ಹನುಮಂತ ಕೋಟೆ, ಬಸವರಾಜ ನೀಲಗಲ್, ಹುಸೇನ್ ಬಾಷಾ, ಅಬ್ದುಲ್ ರೆಹಮಾನ್ ಇತರರಿದ್ದರು.