

ಅಥಣಿ: ಸಮಾಜದಲ್ಲಿ ವಿಶ್ವಕರ್ಮ ಸಮುದಾಯ ಹಿಂದುಳಿದಿದ್ದು, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಬೇಕೆಂದು ವಿಜಯಪುರದ ಪ್ರಕಾಶ ಮಹಾರಾಜರು ಹೇಳಿದರು.
ಪಟ್ಟಣದ ಕಾಳಿಕಾಂಬ ದೇವಸ್ಥಾನದ 50ನೇ ವರ್ಷದ ಪ್ರತಿಷ್ಠಾ ಕಾರ್ಯಕ್ರಮದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಬೆನ್ನೆಲುಬು ರೈತ. ಆ ರೈತನ ಬೆನ್ನುಲುಬು ವಿಶ್ವಕರ್ಮರು. ಸಮುದಾಯ ಒಗ್ಗಟ್ಟಾಗಲು ಇಂತಹ ಧಾರ್ಮಿಕ ಕಾರ್ಯಗಳಿಂದ ಸಾಧ್ಯ. ಸಮುದಾಯದ ಅಭಿವದ್ಧಿಗೆ ಎಲ್ಲರೂ ಮುಂದಾಗಬೇಕೆಂದರು.
ಗಂಗಾವತಿ ಆನೆಗುಂದಿಯ ಸೂರ್ಯನಾರಾಯಣ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಚಿಂತನೆಗಳು ನಮ್ಮಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಬಿತ್ತುತ್ತವೆ ಎಂದರು. ಮುರನಾಳದ ಜಗನ್ನಾಥ ಸ್ವಾಮೀಜಿ ಮಾತನಾಡಿ, ಕಾಳಿಕಾ ಮಾತೆಯನ್ನು ಸ್ಮರಿಸಿದರೆ ಭಕ್ತರ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ ಎಂದರು.
ವಿದ್ಯಾಶಂಕರ ಸ್ವಾಮೀಜಿ, ವಾದಿರಾಜ ಜಂಬಗಿ, ಬಾಳಕಷ್ಣ ಬಡಿಗೇರ, ಎಂ.ಕೆ.ಪತ್ತಾರ, ಶಂಕರ ಕಡಾಲಸ್ಕರ, ರವಿ ಪೂಜಾರಿ, ಗುಂಡು ಮಿರಜಕರ, ಸುವರ್ಣಾ ಪತ್ತಾರ, ಲಲಿತಾ ಪೋತದಾರ, ಯಮುನಾ ಒಡೆಯರ, ಸಂಜು ಪತ್ತಾರ, ಪ್ರಕಾಶ ಸೊನಾರ, ಅಜಿತ ಪವಾರ, ದಯಾನಂದ ಬಡಿಗೇರ, ರಾವಸಾಹೇಬ ಬಡಿಗೇರ ಇತರಿದ್ದರು.