ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಲಿ

YLP vishwadarshana
Published on

ಯಲ್ಲಾಪುರ: ಸಂಸ್ಕಾರ ಮತ್ತು ಧರ್ಮ ಪಾಲನೆ ಶಿಕ್ಷಣದ ಮೂಲ ಉದ್ದೇಶವಾಗಬೇಕು ಎಂದು ಹೈಕೋರ್ಟ್ ವಕೀಲ ನಾರಾಯಣ ಯಾಜಿ ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿಶ್ವದರ್ಶನ ಸಂಭ್ರಮ-2024 ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದರು. ಮೆಕಾಲೆ ಬಂದ ನಂತರ ಭಾರತದಲ್ಲಿ ಶೈಕ್ಷಣಿಕ ಅಧಃಪತನ ಆರಂಭವಾಯಿತು. ಶಿಕ್ಷಣ ವ್ಯಾಪಾರೀಕರಣಗೊಂಡಿತು. ಶಿಕ್ಷಣ ಮತ್ತು ಸಂಸ್ಕಾರಕ್ಕೂ ವ್ಯತ್ಯಾಸವಿದೆ. ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಿದಾಗ ಶಿಕ್ಷಣ ಸಂಸ್ಥೆಗಳು ಸಾರ್ಥಕತೆ ಪಡೆಯುತ್ತವೆ ಎಂದರು.

ಹಿರಿಯ ಸಹಕಾರಿ, ಉದ್ಯಮಿ ಹರನಾಥರಾವ್ ಮತ್ತೀಕೊಪ್ಪ ಅವರಿಗೆ ವಿಶ್ವದರ್ಶನ ಪುರಸ್ಕಾರ ನೀಡಿ ಗೌರವಿಸಲಾಯಿತು. ನಟ ಚಿನ್ಮಯ ಸಿದ್ದಿ ಕೋಟೆಮನೆ ಅವರನ್ನು ಪುರಸ್ಕರಿಸಲಾಯಿತು.

ಗೌರವ ಸ್ವೀಕರಿಸಿದ ಹರನಾಥರಾವ್ ಮಾತನಾಡಿ, ವಿಶ್ವದರ್ಶನ ಸಂಭ್ರಮದಲ್ಲಿ ಗೌರವ ಸ್ವೀಕರಿಸಿರುವುದು ಸಂತಸ ತಂದಿದೆ ಎಂದರು.

ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಪಠ್ಯದ ಜತೆಗೆ ಸಂಸ್ಕಾರ ನೀಡುವ ಕಾರ್ಯದಲ್ಲೂ ಸಂಸ್ಥೆ ಮುಂದುವರಿದಿದೆ. ಇಡಗುಂದಿಯಲ್ಲಿ ಉಚಿತವಾಗಿ ವಿದ್ಯಾರ್ಥಿ ನಿಲಯ ಆರಂಭಿಸಿದ್ದೇವೆ. ಸಿ.ಬಿ.ಎಸ್.ಸಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದೆ. ಬಿಸಿಎ, ಬಿಎಡ್ ಮುಂತಾದ ವಿಭಾಗಗಳು ಉತ್ತಮವಾಗಿ ಮುನ್ನಡೆಯುತ್ತಿದೆ. ಉತ್ತಮ ಪತ್ರಕರ್ತರನ್ನು ಸಿದ್ಧಪಡಿಸಲು ಡಾ.ವಿಜಯ ಸಂಕೇಶ್ವರ ಅವರ ಸಹಕಾರದೊಂದಿಗೆ ಮೀಡಿಯಾ ಸ್ಕೂಲ್ ಆರಂಭಿಸಿದ್ದೇವೆ. ಮೊದಲ ಬ್ಯಾಚ್​ನ ವಿದ್ಯಾರ್ಥಿಗಳು ಬಹತೇಕರು ಮಾಧ್ಯಮ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ವಿಶ್ವದರ್ಶನ ಗ್ರಂಥಾಲಯ ಸದ್ಯದಲ್ಲೇ ಆರಂಭವಾಗಲಿದೆ. ವಿಶ್ವದರ್ಶನ ಪ್ರಕಾಶನದ ಮೂಲಕ ಉತ್ತಮ ಪುಸ್ತಕಗಳನ್ನು ಹೊರತರುವ ಕಾರ್ಯ ನಡೆಯುತ್ತಿದೆ. ಮುಂದಿನ ವರ್ಷ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನೊಳಗೊಂಡ ಬಿ.ಎ ಮತ್ತು ಬಿ.ಎಸ್.ಸಿ ತರಗತಿ ಆರಂಭವಾಗಲಿದೆ. ಏಪ್ರಿಲ್ 11ರಿಂದ 18 ರವರೆಗೆ ಭಾರತೀಯ ಜೀವನ ಶಿಕ್ಷಣ ಶಿಬಿರ ಆಯೋಜಿಸಲಿದ್ದೇವೆ ಎಂದರು.

ಲೆಕ್ಕ ಪರಿಶೋಧಕ ವಿಘ್ನೕಶ್ವರ ಗಾಂವ್ಕರ, ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಇದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಕೆ. ಗಾಂವ್ಕರ ಹಾಗೂ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net