

ಹುಬ್ಬಳ್ಳಿ: ದೇವಸ್ಥಾನಗಳು ನಮ್ಮ ಧರ್ಮದ ಆಧಾರಸ್ತಂಭಗಳು. ಇವುಗಳ ಸ್ಥಿರ-ಚರಾಸ್ತಿ ಸಂರಕ್ಷಣೆ, ರಾಜ್ಯ ಸರ್ಕಾರದ ಕಪಿಮುಷ್ಟಿಯಿಂದ ಹೊರತರುವ ಕೆಲಸ ಮಾಡಬೇಕಿದೆ ಎಂದು ಸನಾತನ ಧರ್ಮ ಸಂಸ್ಥೆಯ ಗೌರವ ಅಧ್ಯಕ್ಷ ರಮಾನಂದ ಗೌಡ ಹೇಳಿದರು.
ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಹಾಗೂ ಹಿಂದು ಜನಜಾಗೃತಿ ಸಮಿತಿಯಿಂದ ಇಲ್ಲಿಯ ವಿದ್ಯಾನಗರದ ಉತ್ತರಾದಿಮಠದ ಶ್ರೀ ಪ್ರಮೋದಾತ್ಮ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಮಟ್ಟದ ದೇವಸ್ಥಾನಗಳ ಅಧಿವೇಶನದಲ್ಲಿ ಅವರು ಮಾತನಾಡಿದರು.
ಟ್ರಸ್ಟಿ-ಟ್ರಸ್ಟಿ ಹಾಗೂ ಅರ್ಚಕರ ಮಧ್ಯೆ ಸಮನ್ವಯತೆ ತರಬೇಕು. ಭಕ್ತರ ಬಗ್ಗೆ ಕಾಳಜಿ ತೋರಬೇಕು. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ಆಡಳಿತ ಮಂಡಳಿಗೆ ನೀಡಬೇಕು. ಈ ಅಭಿಯಾನ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಆರಂಭಿಸಿದ್ದೇವೆ ಎಂದರು.
ರಾಜ-ಮಹಾರಾಜರ ಕಾಲದಿಂದಲೂ ದೇವಸ್ಥಾನಗಳಿಗೆ ಪ್ರೋತ್ಸಾಹವಿದೆ. ಆದರೆ, ದೇವಸ್ಥಾನಗಳಲ್ಲಿ ನಮ್ಮ ಸಂಸ್ಕೃತಿಯೇ ಇಲ್ಲವಾಗಿದೆ. ನಿಯಮಪಾಲನೆ ಆಗಬೇಕು. ಸುಸಂಸ್ಕೃತ ಸಮಾಜ ನಿರ್ಮಿಸಬೇಕು. ಈ ಹಿನ್ನೆಲೆಯಲ್ಲಿ ಮನೆ, ಶಾಲೆ ಹಾಗೂ ದೇವಸ್ಥಾನಗಳಲ್ಲಿ ಧರ್ಮ ಶಿಕ್ಷಣ ನೀಡುವ ಅಗತ್ಯವಿದೆ ಎಂದರು.
ತಮಿಳುನಾಡಿನ ಸ್ಟಾೃಲಿನ್, ಸನಾತನ ಧರ್ಮ ಡೆಂಘಿ, ಕ್ಯಾನ್ಸರ್‌ಗೆ ಹೋಲಿಸಿದಾಗ ನಾವ್ಯಾರು ಧ್ವನಿ ಎತ್ತಲಿಲ್ಲ. ಯಾಕೆಂದರೆ ನಮಗೆ ಧರ್ಮದ ಶಿಕ್ಷಣ ಸಿಕ್ಕಿಲ್ಲ. ಪರಿಪೂರ್ಣ ಜ್ಞಾನವಿದ್ದಿದ್ದರೆ ಅಂದೇ ಅದಕ್ಕೆ ಧ್ವನಿ ಎತ್ತಿ ಉತ್ತರ ಕೊಡುತ್ತಿದ್ದೆವು. ಧರ್ಮ ಆಧಾರಿತ ಶಿಕ್ಷಣ ಕೊಡುವ ಕೆಲಸ ನಡೆಯಬೇಕಿದೆ ಎಂದರು.
ಮಹಾಸಂಘದ ರಾಜ್ಯ ಸಂಚಾಲಕ ಮೋಹನಗೌಡ ಮಾತನಾಡಿ, ರಾಜ್ಯವ್ಯಾಪಿ ಸಭ್ಯ ಸಮವಸ್ತ್ರ ಬಳಕೆ ಅಭಿಯಾನ ಶುರು ಮಾಡುತ್ತೇಔಎ. ದೇವಸ್ಥಾನಗಳ ಶಿಕ್ಷಣ ನೀಡುವ ಕೋರ್ಸ್ ಕೂಡ ರಚನೆ ಆಗಬೇಕಿದೆ. ಈ ನಿಟ್ಟಿನಲ್ಲಿ ರೂಪುರೇಷೆ ಸಿದ್ದಪಡಿಸಿ, ದೇವಸ್ಥಾನಗಳ ಆಡಳಿತ ಮಂಡಳಿಯಿಂದಲೇ ಕಾರ್ಯಾರಂಭ ಮಾಡಲಾಗುವುದು ಎಂದರು.
ಶ್ರೀ ಗಾಯತ್ರಿ ತಪೋಭೂಮಿ ಟ್ರಸ್ಟ್ ಅಧ್ಯಕ್ಷ ವಿನಾಯಕ ಆಕಳವಾಡಿ ಮಾತನಾಡಿ, ಮನೆ, ಶಾಲೆಗಳಲ್ಲಿ ಸಂಸ್ಕಾರ ನೀಡುವ ಕೆಲಸ ಆಗಬೇಕು. ದೇವರು-ಧರ್ಮದ ಬಗ್ಗೆ ಅಭಿಮಾನ, ಭಕ್ತಿ ಮೂಡಬೇಕು. ಪಾಶ್ಚಾತ್ಯ ಸಂಸ್ಕೃತಿ ತೊಲಗಿಸುವ ಕೆಲಸ ನಡೆಯಬೇಕು. ಈ ನಿಟ್ಟಿನಲ್ಲಿ ಮಹಾಸಂಘ ಕೈಗೊಂಡಿರುವ ಕಾರ್ಯ ಶ್ಲಾಘನೀಯ. ನಾವೆಲ್ಲರೂ ಇದಕ್ಕೆ ಕೈಜೋಡಿಸಬೇಕು ಎಂದು ವಿನಂತಿಸಿದರು.
ಮಹಾಸಂಘದ ಸಮನ್ವಯಕಾರ ಗುರುಪ್ರಸಾದ ಗೌಡ, ಶ್ರೀ ಸಿದ್ಧಾರೂಢ ಮಠ ಟ್ರಸ್ಟ್‌ನ ಉದಯಕುಮಾರ ನಾಯಕ, ವಿಲಾಸ ಕುಂಠೆ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಭಾಸ್ಕರ ಜಿತೂರ, ಶಾಂತಣ್ಣ ಕಡಿವಾಲ ಸೇರಿದಂತೆ ಬಹಳಷ್ಟು ಜನರು ಉಪಸ್ಥಿತರಿದ್ದರು.